ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳುವ ಭೀತಿ: ಮಗುವಿನೊಂದಿಗೆ ಮಹಿಳೆ ಆತ್ಮಹತ್ಯೆ

Update: 2018-11-21 14:01 GMT
ಸಾಂದರ್ಭಿಕ ಚಿತ್ರ

ಚಂದ್ರಾಪುರ(ಮಹಾರಾಷ್ಟ್ರ),ನ.21: 28ರ ಹರೆಯದ ಮಹಿಳೆಯೋರ್ವಳು ತನ್ನ ಐದರ ಹರೆಯದ ಮಗನನ್ನು ದುಪಟ್ಟಾದಿಂದ ಎದೆಗೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಯ ರಾಮನಗರ ಪ್ರದೇಶದಲ್ಲಿ ನಡೆದಿದೆ.

ರೂಪಾಲಿ ಗುಜ್ಜೆವಾರ್ ಮತ್ತು ಅಭಿರ್ ಮೃತರು. ರೂಪಾಲಿಯ ಪತಿ ಆಶಿಷ್ ಕಂಪನಿಯೊಂದರಲ್ಲಿ ಸೇಲ್ಸ್‌ಮನ್ ಆಗಿದ್ದಾರೆ.

ದ್ವಿತೀಯ ಬಿ.ಕಾಂ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದ ರೂಪಾಲಿ ಸೋಮವಾರ ಮತ್ತೊಮ್ಮೆ ಪರೀಕ್ಷೆಯನ್ನು ಬರೆದಿದ್ದಳು. ಮನೆಗೆ ಮರಳಿದ ಆಕೆ ಮತ್ತೆ ಹೊರಗೆ ತೆರಳಿ ಟ್ಯೂಷನ್‌ಗೆ ಹೋಗಿದ್ದ ಅಭಿರ್‌ನನ್ನು ಕರೆದುಕೊಂಡು ಹೋಗಿದ್ದಳು. ಸಂಜೆ ಮನೆಗೆ ಮರಳಿದ್ದ ಆಶಿಷ್ ಪತ್ನಿ ಮತ್ತು ಮಗನ ನಾಪತ್ತೆಯ ಬಗ್ಗೆ ಪೊಲೀಸ್ ದೂರನ್ನು ದಾಖಲಿಸಿದ್ದರು.

ರೂಪಾಲಿ ಮಗನನ್ನು ದುಪಟ್ಟಾದಿಂದ ತನ್ನೆದೆಗೆ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು,ಬುಧವಾರ ಬೆಳಿಗ್ಗೆ ಶವಗಳು ಪತ್ತೆಯಾಗಿವೆ.

 ರೂಪಾಲಿಯ ಬ್ಯಾಗ್‌ನಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದ್ದು, ಪರೀಕ್ಷೆಯಲ್ಲಿ ಅನುತ್ತೀರ್ಣಗೊಳ್ಳಬಹುದು ಮತ್ತು ಒಳ್ಳೆಯ ಕೆಲಸ ಲಭಿಸದಿರಬಹುದು ಎಂಬ ಭೀತಿಯಿಂದ ಆತ್ಮಹತ್ಯೆಗೆ ಮಂದಾಗಿರುವುದಾಗಿ ಆಕೆ ಬರೆದಿದ್ದಾಳೆ ಎಂದು ತಿಳಿಸಿರುವ ಪೊಲೀಸರು,ಈ ಪತ್ರವನ್ನು ನಿಜವಾಗಿ ಆಕೆಯೇ ಬರೆದಿದ್ದಾಳೆಯೇ ಎನ್ನುವುದನ್ನು ಪರಿಶೀಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News