ತಿಂಗಳಂತ್ಯದೊಳಗೆ ರಾಜ್ಯೋತ್ಸವ ಪ್ರಶಸ್ತಿ ವಿತರಣೆ: ಜಯಮಾಲ

Update: 2018-11-21 14:13 GMT

ಉಡುಪಿ, ನ.21: ನವೆಂಬರ್ ತಿಂಗಳ ಕೊನೆಯೊಳಗೆ ಚುನಾವಣಾ ನೀತಿ ಸಂಹಿತೆ ಕಾರಣಕ್ಕಾಗಿ ಮುಂದೂಡಲಾಗಿರುವ ರಾಜ್ಯೋತ್ಸವ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ತಿಳಿಸಿದ್ದಾರೆ.

ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ವಿವಿಧ ಸೌಲಭ್ಯ ಗಳನ್ನು ಲೋಕಾರ್ಪಣೆಗೊಳಿಸುವುದಕ್ಕೆ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಅ.30ರಂದೇ ತಾವು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಅಂತಿಮಗೊಳಿಸಿ ಮುಖ್ಯಮಂತ್ರಿಗಳಿಗೆ ನೀಡಿರುವುದಾಗಿ ತಿಳಿಸಿದ ಅವರು, ಶೀಘ್ರವೇ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟಿಸಿ, ತಿಂಗಳಂತ್ಯದೊಳಗೆ ಪ್ರಶಸ್ತಿ ವಿತರಣೆಯನ್ನೂ ಹಮ್ಮಿಕೊಳ್ಳಲಾಗುವುದು ಎಂದರು.

ರಾಜ್ಯೋತ್ಸವ ಪ್ರಶಸ್ತಿಯ ಘನತೆ-ಗೌರವಗಳಿಗೆ ಚ್ಯುತಿ ಬರದಂತೆ ನಾವು ಪ್ರಶಸ್ತಿಯನ್ನು ವಿತರಿಸಲಿದ್ದೇವೆ ಎಂದ ಅವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಸಾಮಾಜಿಕ ಹಾಗೂ ಪ್ರಾದೇಶಿಕ ನ್ಯಾಯಕ್ಕನುಗುಣವಾಗಿ ಆಯ್ಕೆ ಮಾಡಿದ್ದು, ನ.28ರಂದು ಅದರ ವಿತರಣೆ ಉಡುಪಿಯಲ್ಲಿ ಜರಗಲಿದೆ ಎಂದು ಸಚಿವೆ ಪ್ರಕಟಿಸಿದರು.

ಕನಿಷ್ಠ ಬೆಂಬಲಬೆಲೆಗಾಗಿ ಒತ್ತಾಯಿಸಿ ರಾಜ್ಯದ ಕಬ್ಬು ಬೆಳೆಗಾರರ ಪ್ರತಿಭಟನೆಯ ಕುರಿತು ಪ್ರಶ್ನಿಸಿದಾಗ, ರೈತರ ಸಮಸ್ಯೆಯನ್ನು ನಮ್ಮದೇ ಸಮಸ್ಯೆಯೆಂದು ನಾವು ಭಾವಿಸಿದ್ದೇವೆ. ರೈತರ ಸಮಸ್ಯೆಗೆ ಮೊದಲು ಸ್ಪಂದಿಸುವ ಸರಕಾರ ನಮ್ಮದು. ರೈತರ ಸಮಸ್ಯೆಗಳಿಗೆ ನಮ್ಮ ಮನಸ್ಸು ಸದಾ ತುಡಿಯುತ್ತದೆ ಎಂದರು.

ಮಹಿಳೆಯರ ಕುರಿತಂತೆ ಮುಖ್ಯಮಂತ್ರಿ ಅವಮಾನಕರವಾಗಿ ಮಾತನಾಡಿ ದ್ದಾರೆ ಎಂಬ ಆರೋಪದ ಕುರಿತು ಪ್ರಶ್ನಿಸಿದಾಗ, ಕುಮಾರಸ್ವಾಮಿ ಅವರು ಎಂದೂ ಮಹಿಳೆಯರ ಕುರಿತು ಅಗೌರವಯುತವಾಗಿ ನಡೆದುಕೊಂಡಿಲ್ಲ ಹಾಗೂ ಅವರ ವಿರುದ್ಧವಾಗಿ ಏನನ್ನೂ ಮಾತನಾಡಿಲ್ಲ. ಆದರೆ ಮಾಧ್ಯಮದ ಒಂದು ವರ್ಗ ಅವರ ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಿ ವರದಿ ಮಾಡಿರುವುದೇ ಸಮಸ್ಯೆಯಾಗಿದೆ. ಸಿಎಂ ಹೇಳಿಕೆಯಲ್ಲಿ ಯಾವುದೇ ಗೂಢಾರ್ಥಗಳಿರಲಿಲ್ಲ ಎಂದು ಸಮರ್ಥಿಸಿಕೊಂಡರು.

ಚುನಾವಣಾ ನೀತಿ ಸಂಹಿತೆಯ ಕಾರಣಕ್ಕಾಗಿ ಮುಂದೂಡಲಾದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯನ್ನು ಈ ತಿಂಗಳೊಳಗೆ ಮುಗಿಸುವುದಾಗಿ ನುಡಿದ ಜಯಮಾಲಾ, ರಾಮಮಂದಿರ ಹಾಗೂ ಶಬರಿಮಲೆ ವಿವಾದದ ಕುರಿತು ಯಾವುದೇ ಸ್ಪಷ್ಟ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ಜಿಲ್ಲೆಯ ಮರಳು ಸಮಸ್ಯೆಯ ಕುರಿತಂತೆ ತಾವು ಜನರಿಗೆ ನ್ಯಾಯಕೊಟ್ಟಿದ್ದೇವೆ. ಮುಂದೆಯೂ ಕೊಡುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News