ಪ್ರಧಾನಿ ಪಟ್ಟಕ್ಕೆ ರಾಹುಲ್ ಸಮರ್ಥ: ವೀರಪ್ಪ ಮೊಯ್ಲಿ

Update: 2018-11-21 14:54 GMT

ಹೈದರಾಬಾದ್, ನ.21: ಬಿಜೆಪಿ ವಿರುದ್ಧ ಮೈತ್ರಿಕೂಟ ರಚನೆಗೆ ಕಸರತ್ತು ಮುಂದುವರಿದಿರುವಂತೆಯೇ ಹಿರಿಯ ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮರ್ಥ ಎಂದು ಹೇಳಿಕೆ ನೀಡಿದ್ದಾರೆ.

  ಪಿಟಿಐ ಸುದ್ದಿಸಂಸ್ಥೆಯ ಜೊತೆ ಮಾತನಾಡುತ್ತಿದ್ದ ವೀರಪ್ಪ ಮೊಯ್ಲಿ, ಪ್ರಸ್ತಾವಿತ ಬಿಜೆಪಿ ವಿರೋಧಿ ಮೈತ್ರಿಕೂಟ ರಾಹುಲ್‌ರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತದೆಯೇ ಎಂಬ ಪ್ರಶ್ನೆಗೆ ‘‘ಈ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ. ಆದರೆ ಅಂತಿಮವಾಗಿ ರಾಹುಲ್ ಗಾಂಧಿಯವರೇ ಪ್ರಧಾನಿ ಹುದ್ದೆಗೆ ಸೂಕ್ತ ಹಾಗೂ ಸಮರ್ಥ ಆಯ್ಕೆ ’’ ಎಂದು ಉತ್ತರಿಸಿದರು.

ತೆಲುಗು ದೇಶಂ ಪಕ್ಷ(ಟಿಡಿಪಿ)ದ ಅಧ್ಯಕ್ಷ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ವಿಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮೊಯ್ಲಿ ಶ್ಲಾಘಿಸಿದರು. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಮಿತ್ರಪಕ್ಷಗಳು ವಿಮುಖವಾಗುತ್ತಿದ್ದರೆ ಕಾಂಗ್ರೆಸ್ ತನ್ನ ನೆಲೆಯನ್ನು ಭದ್ರಗೊಳಿಸುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಎನ್‌ಡಿಎ ವಿರುದ್ಧ ವಿರೋಧ ಪಕ್ಷಗಳ ಒಕ್ಕೂಟ ರಚನೆಯಾಗಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ದಿನಗಳು ಕಾಂಗ್ರೆಸ್‌ಗೆ ಅನುಕೂಲಕರವಾಗಲಿದೆ. ವಿಪಕ್ಷಗಳ ಏಕತೆ ನನಸಾಗಲಿದೆ. ಚುನಾವಣೆ ನಡೆಯಲಿರುವ ಮಧ್ಯಪ್ರದೇಶ, ರಾಜಸ್ತಾನ, ತೆಲಂಗಾಣ, ಛತ್ತೀಸ್‌ಗಢ, ಮಿಝೋರಾಂ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಈ ಫಲಿತಾಂಶವು ನಮ್ಮ ನಾಯಕ ರಾಹುಲ್ ಅವರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಲಿದೆ ಎಂದರು. ಪ್ರಧಾನಿ ಹುದ್ದೆಯ ಪ್ರಶ್ನೆ ಬಂದಾಗ ವಿಪಕ್ಷಗಳ ಏಕತೆ ಭಗ್ನವಾಗುವ ಸಾಧ್ಯತೆಗಳಿವೆ ಎಂಬ ವರದಿಗೆ ಪ್ರತಿಕ್ರಿಯಿಸಿದ ಅವರು, ಇದು ಸರಿಯಲ್ಲ. ಈಗ ಎಲ್ಲಾ ವಿರೋಧಪಕ್ಷಗಳೂ ಮೋದಿ ಹಾಗೂ ಬಿಜೆಪಿ ವಿರುದ್ಧ ಒಗ್ಗೂಡಿವೆ. ಅದು ಮುಖ್ಯ ಎಂದುತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News