ಮಾರ್ಚ್ 2019ರ ವೇಳೆಗೆ ದೇಶದ ಶೇ.50ರಷ್ಟು ಎಟಿಎಂಗಳು ಮುಚ್ಚುವ ಸಾಧ್ಯತೆ

Update: 2018-11-21 14:56 GMT

ಮುಂಬೈ,ನ.21: ನಿಯಂತ್ರಣ ಕ್ರಮಗಳಲ್ಲಿನ ಬದಲಾವಣೆಗಳಿಂದಾಗಿ ಎಟಿಎಂಗಳನ್ನು ನಿರ್ವಹಿಸುವುದು ಕಷ್ಟವಾಗುತ್ತಿದ್ದು,2019, ಮಾರ್ಚ್ ವೇಳೆಗೆ ಭಾರತದಲ್ಲಿಯ 2.38 ಎಟಿಎಂಗಳ ಪೈಕಿ ಅರ್ಧದಷ್ಟು ಯಂತ್ರಗಳು ಮುಚ್ಚಲ್ಪಡಬಹುದು ಎಂದು ಎಟಿಎಂ ಉದ್ಯಮದ ಒಕ್ಕೂಟ(ಸಿಎಟಿಎಂಐ) ಬುಧವಾರ ಎಚ್ಚರಿಕೆ ನೀಡಿದೆ.

ಎಟಿಎಂಗಳ ಮುಚ್ಚುವಿಕೆಯು ಸಾವಿರಾರು ಉದ್ಯೋಗಗಳ ನಷ್ಟಕ್ಕೆ ಕಾರಣವಾಗಲಿದೆ ಮತ್ತು ಸರಕಾರದ ಆರ್ಥಿಕ ಸೇರ್ಪಡೆ ಪ್ರಯತ್ನಗಳ ಮೇಲೆ ದುಷ್ಪರಿಣಾಮವನ್ನು ಬೀರಲಿದೆ. ಸೇವಾ ಪೂರೈಕೆದಾರರು 2019,ಮಾರ್ಚ್ ವೇಳೆಗೆ ಸುಮಾರು 1.13 ಲ.ಎಟಿಎಂಗಳನ್ನು ಮುಚ್ಚುವುದು ಅನಿವಾರ್ಯವಾಗಲಿದೆ. ಇವುಗಳಲ್ಲಿ ಸುಮಾರು ಒಂದು ಲಕ್ಷ ಆಫ್-ಸೈಟ್ ಎಟಿಎಂ ಮತ್ತು 15,000ಕ್ಕೂ ಅಧಿಕ ವೈಟ್ ಲೇಬಲ್ ಎಟಿಎಂಗಳು ಸೇರಿವೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

 ಉದ್ಯಮವೀಗ ಬಿಕ್ಕಟ್ಟಿನ ಉತ್ತುಂಗ ಸ್ಥಿತಿಯಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಎಟಿಎಂಗಳು ಮುಚ್ಚಲಿವೆ. ಫಲಾನುಭವಿಗಳು ಸರಕಾರದ ಸಬ್ಸಿಡಿಗಳನ್ನು ಪಡೆಯಲು ಈ ಯಂತ್ರಗಳನ್ನೇ ಬಳಸುತ್ತಿರುವುದರಿಂದ ಇದು ಆರ್ಥಿಕ ಸೇರ್ಪಡೆ ಪ್ರಯತ್ನಗಳ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅದು ಹೇಳಿದೆ.

 ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್‌ಗಳ ಉನ್ನತೀಕರಣ ಸೇರಿದಂತೆ ಇತ್ತೀಚಿನ ನಿಯಮಾವಳಿಗಳಲ್ಲಿ ಬದಲಾವಣೆಗಳಿಂದಾಗಿ ಉದ್ಯಮವು 3,000 ಕೋ.ರೂ.ಗಳ ವೆಚ್ಚವನ್ನು ಭರಿಸಬೇಕಾಗುತ್ತದೆ. ಎಟಿಎಂ ಉದ್ಯಮವು ಇನ್ನೂ ನೋಟು ನಿಷೇಧದ ಆಘಾತದಿಂದ ಹೊರಗೆ ಬಂದಿಲ್ಲ. ಹೀಗಿರುವಾಗ ಹೆಚ್ಚುವರಿ ಕಠಿಣ ಮಾನದಂಡಗಳನ್ನು ಪೂರೈಸುವುದು ಭಾರೀ ವೆಚ್ಚಕ್ಕೆ ಕಾರಣವಾಗಿ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲಿದೆ. ಸೇವಾ ಪೂರೈಕೆದಾರರಿಗೆ ಈ ಹೆಚ್ಚುವರಿ ಹೊರೆಯನ್ನು ಭರಿಸುವ ಹಣಕಾಸು ಸಾಮರ್ಥ್ಯವಿಲ್ಲ. ಈ ಹೊರೆಯನ್ನು ಬ್ಯಾಂಕುಗಳು ಭರಿಸದಿದ್ದರೆ ಉದ್ಯಮವು ಹೆಚ್ಚಿನ ಗುತ್ತಿಗೆಗಳನ್ನು ಸ್ಥಗಿತಗೊಳಿಸಬೇಕಾಗುತ್ತದೆ ಮತ್ತು ಇದು ಭಾರೀ ಸಂಖ್ಯೆಯಲ್ಲಿ ಎಟಿಎಂಗಳ ಮುಚ್ಚುವಿಕೆಗೆ ಕಾರಣವಾಗುತ್ತದೆ ಎಂದು ಸಿಎಟಿಎಂಐ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News