ನಿವೇಶನರಹಿತರಿಗೆ ಹಕ್ಕುಪತ್ರ ನೀಡಲು ಸರಕಾರ ಬದ್ಧ: ಜಯಮಾಲಾ

Update: 2018-11-21 15:20 GMT

 ಕುಂದಾಪುರ, ನ.21: ನಿವೇಶನ ರಹಿತರಿಗೆ ನಿವೇಶನ ಒದಗಿಸಿ ಮನೆ ನಿರ್ಮಿ ಸಲು ನೆರವು ಹಾಗೂ ರಾಜ್ಯದ ಎಲ್ಲ ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಹೇಳಿದ್ದಾರೆ.

ಕುಂದಾಪುರ ಜೂನಿಯರ್ ಕಾಲೇಜಿನ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ಬುಧವಾರ ಆಯೋಜಿಸಲಾದ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂದಾಪುರ ಹೋಬಳಿಯ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡುತಿದ್ದರು.

ರಾಜ್ಯ ಸರಕಾರವು ಡೀಮ್ಡ್ ಫಾರೆಸ್ಟ್ ಸೇರಿದಂತೆ ವಿವಿಧ ಕಾನೂನು ರೀತಿಯ ಸಮಸ್ಯೆಗಳಿದ್ದಲ್ಲಿ, ಮಾನವೀಯ ನೆಲೆಯಲ್ಲಿ ಅದನ್ನು ಪರಿಹರಿಸಿ ಹಕ್ಕುಪತ್ರ ನೀಡಲು ಪ್ರಯತ್ನಿಸಲಾಗುವುದು. ಇದು ಸರಕಾರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕುಂದಾಪುರ ಹೋಬಳಿಯ 120 ಮಂದಿಗೆ 94 ಸಿ, 66 ಸಂಧ್ಯಾ ಸುರಕ್ಷಾ ಹಾಗೂ 34 ವಿಧವಾ ವೇತನ ಸೇರಿ ಒಟ್ಟು 220 ಮಂದಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಾಯಿತು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ವಹಿಸಿದ್ದರು.
ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಟಿ.ಭೂಬಾಲನ್, ತಾಪಂ ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್, ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು.

ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ ಸ್ವಾಗತಿಸಿದರು. ಕಾಲೇಜಿನ ಉಪ ಪ್ರಾಂಶುಪಾಲ ಅರುಣ್ ಕುಮಾರ್ ವಂದಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News