1.66 ಬಿಲಿಯ ಡಾಲರ್ ಪಾಕ್ ನೆರವು ಸ್ಥಗಿತಗೊಳಿಸಿದ ಅಮೆರಿಕ

Update: 2018-11-21 16:37 GMT

ವಾಶಿಂಗ್ಟನ್, ನ. 21: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ, ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ 1.66 ಬಿಲಿಯ ಡಾಲರ್ (ಸುಮಾರು 11,800 ಕೋಟಿ ರೂಪಾಯಿ) ರಕ್ಷಣಾ ನೆರವನ್ನು ಅಮೆರಿಕ ಸ್ಥಗಿತಗೊಳಿಸಿದೆ ಎಂದು ಆ ದೇಶದ ರಕ್ಷಣಾ ಇಲಾಖೆ ‘ಪೆಂಟಗನ್’ ಹೇಳಿದೆ.

ಪಾಕಿಸ್ತಾನ ಅಮೆರಿಕಕ್ಕಾಗಿ ಒಂದೇ ಒಂದು ಕೆಲಸ ಮಾಡುವುದಿಲ್ಲ ಹಾಗೂ ನ್ಯೂಯಾರ್ಕ್‌ನ ಅವಳಿ ಗೋಪುರಗಳ ಮೇಲೆ ದಾಳಿ ನಡೆಸಿದ ಭಯೋತ್ಪಾದಕ ಗುಂಪು ಅಲ್-ಖಾಯಿದದ ಮುಖ್ಯಸ್ಥ ಒಸಾಮ ಬಿನ್ ಲಾದನ್, ಸೇನಾ ನೆಲೆಗಳಿರುವ ನಗರ ಅಬೊಟಾಬಾದ್‌ನಲ್ಲಿ ಅಡಗಿಕೊಳ್ಳಲು ಅವಕಾಶ ನೀಡಿತ್ತು ಎಂಬುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿಕೆ ನೀಡಿದ ಎರಡು ದಿನಗಳ ಬಳಿಕ ಪೆಂಟಗನ್ ಈ ಹೇಳಿಕೆ ಹೊರಡಿಸಿದೆ.

‘‘ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ 1.66 ಬಿಲಿಯ ಡಾಲರ್ ರಕ್ಷಣಾ ನೆರವನ್ನು ಸ್ಥಗಿತಗೊಳಿಸಲಾಗಿದೆ’’ ಎಂದು ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ರಾಬ್ ಮ್ಯಾನಿಂಗ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ ರಕ್ಷಣಾ ನೆರವನ್ನು ಅಮೆರಿಕ ಸ್ಥಗಿತಗೊಳಿಸಿರುವುದು ಪಾಕಿಸ್ತಾನದ ಬಗ್ಗೆ ಅದರ ಹತಾಶೆಯನ್ನು ಸೂಚಿಸುತ್ತದೆ ಎಂದು ಹಿಂದಿನ ಒಬಾಮ ಆಡಳಿತದ ವೇಳೆ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಮಧ್ಯ ಏಶ್ಯಕ್ಕಾಗಿನ ಉಪ ಸಹಾಯಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಡೇವಿಡ್ ಸೆಡ್ನಿ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News