ಉಡುಪಿ: ಸಂಭ್ರಮದ ಲಕ್ಷ ದೀಪೋತ್ಸವ ಪ್ರಾರಂಭ

Update: 2018-11-21 16:45 GMT

ಉಡುಪಿ, ನ.21: ಉತ್ಥಾನ ದ್ವಾದಶಿಯ ಶುಭಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಾಲ್ಕು ದಿನಗಳ ಲಕ್ಷದೀಪೋತ್ಸವ ಹಾಗೂ ತೆಪ್ಪೋತ್ಸವದ ಸಂಭ್ರಮ ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮಂಗಳವಾರದಿಂದ ಪ್ರಾರಂಭಗೊಂಡಿದೆ.

ಶ್ರೀಕೃಷ್ಣ ಮಠದ ಪರಿಸರ, ಮಧ್ವಸರೋವರ, ರಥಬೀದಿಯ ಸುತ್ತಮುತ್ತ ಲಕ್ಷಕ್ಕೂ ಅಧಿಕ ಹಣತೆಯ ದೀಪಗಳು ಹಾಗೂ ವರ್ಣವೈವಿಧ್ಯದ ವಿದ್ಯುದ್ದೀಪ ಗಳು ಸಂಜೆಯ ವೇಳೆ ಬೆಳಗಿ ರಥಬೀದಿ ಪರಿಸರ ನಂದಗೋಕುಲದಂತೆ ಭಾಸವಾಗುತ್ತಿದೆ.

ಮಧ್ವಸರೋವರದಲ್ಲಿ ಮಂಟಪದ ರೀತಿಯಲ್ಲಿ ಅಲಂಕೃತ ದೋಣಿಯಲ್ಲಿ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ಉತ್ಸವಮೂರ್ತಿಗಳನ್ನಿನ್ನು ಪ್ರದಕ್ಷಿಣೆ ಬರುವ ತೆಪ್ಪೋತ್ಸವ ನಡೆಯಿತು. ಮಧ್ವಸರೋವರದ ಸುತ್ತಲೂ ಮಣ್ಣಿನ ಹಣತೆಗಳಲ್ಲಿ ದೀಪವನ್ನು ಬೆಳಗಿಸುವ ಮೂಲಕ ಅಲ್ಲೊಂದು ಹೊಸ ಲೋಕವನ್ನು ಸೃಷ್ಟಿಸಲಾಯಿತು. ಪರ್ಯಾಯಶ್ರೀಗಳ ನೇತೃತ್ವದಲ್ಲಿ ತೆಪ್ಪೋತ್ಸವ ನಡೆಯಿತು. ಬಳಿಕ ರಥಬೀದಿಯ ಸುತ್ತಲೂ ಇರಿಸಿದ ಸಾವಿರಾರು ದಳಿಗಳ ಮೇಲಿರಿಸಿದ ಮಣ್ಣಿನ ಹಣತೆಯಲ್ಲಿ ಸಾರ್ವಜನಿಕರು ದೀಪವನ್ನು ಬೆಳಗಿಸುವ ಮೂಲಕ ಲಕ್ಷದೀಪೋತ್ಸವ ಆರಂಭಗೊಂಡಿತು.

ಈ ಸಾಲು ದೀಪಗಳ ಮಧ್ಯೆ ಕೃಷ್ಣ ಹಾಗೂ ಮುಖ್ಯಪ್ರಾಣರ ಉತ್ಸವ ಮೂರ್ತಿಯನ್ನಿರಿಸಿದ ಗರುಡ ರಥ ಹಾಗೂ ಅನಂತೇಶ್ವರ ಮತ್ತು ಚಂದ್ರವೌಳೀಶ್ವರ ಉತ್ಸವ ಮೂರ್ತಿಯನ್ನಿರಿಸಿದ ಮಹಾಪೂಜಾ ರಥಗಳು ರಥಬೀದಿಯ ಸುತ್ತ ಸಾಗಿ ಬರುವ ದೃಶ್ಯ ನೋಡಿ ನೆರೆದ ಜನಸಮೂಹ ಭಾವಪರವಶವಾಯಿತು. ಮೋಹಕವಾಗಿರುತ್ತದೆ. ಬಳಿಕ ಅತ್ಯಾಕರ್ಷಕ ಹಾಗೂ ವೈವಿಧ್ಯಮಯ ಸುಡುಮದ್ದುಗಳ ಪ್ರದರ್ಶನವೂ ರಥಬೀದಿಯಲ್ಲಿ ನಡೆಯಿತು.

ಅಪರಾಹ್ನ ರಥಬೀದಿಯಲ್ಲಿ ನಿರ್ಮಿಸಿದ ಅಟ್ಟಣಿಗೆಯಲ್ಲಿ ಹಣತೆಗಳಿಗೆ ಮುಹೂರ್ತವನ್ನು ಪರ್ಯಾಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಗಳಲ್ಲದೇ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ಇದರಲ್ಲಿ ಪಾಲ್ಗೊಂಡರು.

ಶ್ರೀಮಧ್ವ ಸರೋವರದಲ್ಲಿ ಸಂಜೆ ನಡೆದ ತುಳಸೀ ಪೂಜೆ, ಕ್ಷೀರಾಬ್ದಿ ಪೂಜೆಯಲ್ಲಿ ಪಲಿಮಾರುಶ್ರೀಗಳಲ್ಲದೇ, ಕೃಷ್ಣಾಪುರ, ಅದಮಾರು ಉಭಯಶ್ರೀ ಗಳು, ಪೇಜಾವರ ಕಿರಿಯ, ಕೃಷ್ಣಾಪುರಶ್ರೀಗಳು ಪಾಲ್ಗೊಂಡರು. ಈ ವೇಳೆ ಭಜನಾ ಮಂಡಳಿಗಳ ಸಾವಿರಾರು ಮಹಿಳಾ ಎಸದಸ್ಯರು ಮಧ್ವ ಸರೋವರದ ಸುತ್ತಲೂ ಮೆಟ್ಟಲುಗಳಲ್ಲಿ ಕುಳಿತು ಏಕಕಂಠದಲ್ಲಿ ಭಜನೆಗಳನ್ನು ಹಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News