ಶೇ.90 ಮುಸ್ಲಿಮರು ಓಟು ಹಾಕದಿದ್ದರೆ ನಮಗೆ ಭಾರೀ ಸೋಲಾಗಲಿದೆ: ಕಮಲನಾಥ್ ಹೇಳಿಕೆಯ ಮತ್ತೊಂದು ವೀಡಿಯೊ ವೈರಲ್

Update: 2018-11-21 17:03 GMT

ಹೊಸದಿಲ್ಲಿ, ನ.21: ಮಧ್ಯಪ್ರದೇಶದಲ್ಲಿ ಉತ್ಸಾಹದಿಂದ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಕಾಂಗ್ರೆಸ್‌ಗೆ ಮುಜುಗುರವಾಗಬಲ್ಲ ಮತ್ತೊಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಕ್ಷದ ಮುಖಂಡರ ಸಭೆಯಲ್ಲಿ ಹಿರಿಯ ಮುಖಂಡ ಕಮಲನಾಥ್ ಪಕ್ಷವು ಮುಸ್ಲಿಮರ ಮತವನ್ನು ನೆಚ್ಚಿಕೊಂಡಿರುವ ಬಗ್ಗೆ ಆಡಿರುವ ಮಾತು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

  ಮಧ್ಯಪ್ರದೇಶದಲ್ಲಿ ಈ ಹಿಂದೆ ನಡೆದಿರುವ ಚುನಾವಣೆಯಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿರುವ ಬೂತ್‌ಗಳಲ್ಲಿ ಎಷ್ಟು ಶೇಕಡಾ ಮತದಾನ ನಡೆದಿದೆ ಮತ್ತು ಮುಸ್ಲಿಮರು ಯಾಕೆ ಮತದಾನ ಮಾಡಲಿಲ್ಲ ಎಂಬುದರ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದು ಕಾಂಗ್ರೆಸ್ ಮುಖಂಡರನ್ನು ಕಮಲನಾಥ್ ಒತ್ತಾಯಿಸುವುದನ್ನು ವೀಡಿಯೊದಲ್ಲಿ ಕೇಳಬಹುದಾಗಿದೆ.

 ಕೆಲವು ಬೂತ್‌ಗಳಲ್ಲಿ ಮತದಾನದ ಪ್ರಮಾಣ ಶೇ.60ರಷ್ಟಿದ್ದರೆ ಮತದಾನದ ಪ್ರಮಾಣ ಕಡಿಮೆಯಾಗಲು ಕಾರಣವೇನು ಎಂಬುದನ್ನು ಪರಿಶೀಲಿಸಬೇಕು. ನಮಗೆ ಶೇ.80ರ ಪ್ರಮಾಣದ ಅಗತ್ಯವಿಲ್ಲ, ಶೇ.90ರಷ್ಟು ಮುಸ್ಲಿಮರು ಮತ ಚಲಾಯಿಸುವ ಅಗತ್ಯವಿದೆ. ಇಲ್ಲದಿದ್ದರೆ ನಮಗೆ ಭಾರೀ ಸೋಲಾಗಬಹುದು ಎಂದು ಕಮಲನಾಥ್ ಹೇಳುತ್ತಿರುವುದನ್ನು ವೀಡಿಯೊದಲ್ಲಿ ಕೇಳಬಹುದಾಗಿದೆ.

   ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ, ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣ ನಡೆಸುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ವೀಡಿಯೊ ಸಾಕ್ಷ ಸಹಿತ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದೆ. ಮಧ್ಯಪ್ರದೇಶ ವಿಧಾನಸಭೆಯ 231 ಸ್ಥಾನಗಳಿಗೆ ನವೆಂಬರ್ 28ರಂದು ಚುನಾವಣೆ ನಡೆಯಲಿದೆ.

 ಕಮಲನಾಥ್ ವಿವಾದಾತ್ಮಕ ವೀಡಿಯೊ ಬಹಿರಂಗವಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹೇಳಿಕೆ ನೀಡಿದ್ದ ಅವರು, ಅಭ್ಯರ್ಥಿಗೆ ಗೆಲ್ಲುವ ಸಾಮರ್ಥ್ಯವಿದ್ದರೆ ಸಾಕು. ಆತನ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರೂ ಅದು ನಗಣ್ಯ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News