ಮಹಿಳೆಯ ಮಾನಭಂಗ ಯತ್ನ ಪ್ರಕರಣ; ಆರೋಪಿ ಬಂಧನ

Update: 2018-11-21 17:18 GMT

ಪುತ್ತೂರು, ನ. 21: ಮಿಕ್ಸಿ ಮಾರಾಟದ ನೆಪದಲ್ಲಿ ಬೈಕಿನಲ್ಲಿ ಮನೆಯಂಗಳಕ್ಕೆ ಬಂದ ವ್ಯಕ್ತಿಯೊಬ್ಬ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಮನೆಯೊಳಗಿದ್ದ ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿದ ಘಟನೆ ಪುತ್ತೂರು ತಾಲ್ಲೂಕಿನ ಪಾಣಾಜೆ ಗ್ರಾಮದಲ್ಲಿ ನಡೆದಿದ್ದು, ಸಂಪ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಸನ ಜಿಲ್ಲೆಯ ಅರಸೀಕರೆ ತಾಲ್ಲೂಕಿನ ಗಂಡಸಿ ಹೋಬಳಿಯ ಹೊಸಹಳ್ಳಿ ಗ್ರಾಮದ ನಿವಾಸಿ, ಮಿಕ್ಸಿ ಮಾರಾಟ ಕಾಯಕ ನಡೆಸುತ್ತಿದ್ದ ಧನಂಜಯ (24) ಬಂಧಿತ ಆರೋಪಿ.

ಪಾಣಾಜೆ ಗ್ರಾಮದ ನಡುಕಟ್ಟ ಎಂಬಲ್ಲಿ ಈ ಘಟನೆ ಸೋಮವಾರ ನಡೆದಿತ್ತು. ಘಟನೆಯ ಕುರಿತು ಪ್ರದೀಪ್ ಕುಮಾರ್ ಎಂಬವರ ಪತ್ನಿ ಸಂಪ್ಯ ಪೊಲೀಸರಿಗೆ ದೂರು ನೀಡಿದ್ದರು.

ಕೆಲ ದಿನಗಳ ಹಿಂದೆ ದಿವ್ಯಾ ಅವರು ಮನೆಯಲ್ಲಿದ್ದ ವೇಳೆ ಮಿಕ್ಸಿ ಮಾರಾಟ ಮಾಡಿಕೊಂಡು ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮನೆಗೆ ಬಂದು ಮಿಕ್ಸಿ ಬೇಕಾ ಎಂದು ಕೇಳಿದ್ದ, ದಿವ್ಯಾ ಅವರು ಬೇಡಾ ಎಂದಿದ್ದ ವೇಳೆ ಹಳೆಯ ಮಿಕ್ಸಿ ಇದ್ದರೆ ಬದಲಾಯಿಸಿ ಹೊಸ ಮಿಕ್ಸಿ ಕೊಡುವುದಾಗಿ ತಿಳಿಸಿದ್ದ. ದಿವ್ಯಾ ಅವರು ಬೇಡಾ ಎಂದು ತಿಳಿಸಿದ್ದ ಹಿನ್ನಲೆಯಲ್ಲಿ ಹಿಂತಿರುಗಿದ್ದ. ಅದೇ ವ್ಯಕ್ತಿ ಸೋಮವಾರ ಮತ್ತೆ ಬೈಕಿನಲ್ಲಿ ಮನೆಯಂಗಳಕ್ಕೆ ಬಂದು, ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಮನೆಯೊಳಗಿದ್ದ ದಿವ್ಯಾ ಅವರ ಕೈಹಿಡಿದು ಎಳೆದು ಮಾನಭಂಗಕ್ಕೆ ಯತ್ನಿಸಿರುವುದಾಗಿ ಆರೋಪಿಸಲಾಗಿತ್ತು.

ಘಟನೆಯ ವೇಳೆ ದಿವ್ಯಾ ಅವರು ಬೊಬ್ಬೆ ಹೊಡೆದಿದ್ದರು. ಪತ್ನಿಯ ಬೊಬ್ಬೆ ಕೇಳಿ ಪತಿ ಮನೆಗೆ ಬಂದ ವೇಳೆ ಆರೋಪಿಯು ಅವರಿಬ್ಬರಿಗೆ ಬೆದರಿಕೆಯೊಡ್ಡಿ ಬೈಕಿನಲ್ಲಿ ಪರಾರಿಯಾಗಿದ್ದ. ದಿವ್ಯಾ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಸಂಪ್ಯ ಪೊಲೀಸರು ಆರೋಪಿಯನ್ನು ಪುತ್ತೂರು ತಾಲ್ಲೂಕಿನ ಇರ್ದೆ ಗ್ರಾಮದ ದೂಮಡ್ಕ ಎಂಬಲ್ಲಿ ಪತ್ತೆ ಮಾಡಿ ಬಂಧಿಸಿದ್ದಾರೆ. ಆರೋಪಿ ಧನಂಜಯ ಹಾಸನದಿಂದ ಪುತ್ತೂರಿಗೆ ಹೋಗಿ ಬರುತ್ತಾ, ಈ ನಡುವೆ ಕೆಲವು ದಿನ ಪುತ್ತೂರಿನ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿ ಮಿಕ್ಸಿ ಮಾರಾಟ ಕಾಯಕ ನಡೆಸುತ್ತಿದ್ದ ಎಂಬ ಮಾಹಿತಿ ಪೊಲೀಸ್ ವಿಚಾರಣೆಯ ವೇಳೆ ತಿಳಿದು ಬಂದಿದೆ.

ಬಂಧಿತ ಆರೋಪಿ ಧನಂಜಯನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News