ಮಾಲಿನ್ಯ ನಿಯಂತ್ರಣದಲ್ಲಿ ನೈಸರ್ಗಿಕ ಇಂಧನ ಪಾತ್ರ ಮಹತ್ತರ: ಕೇಂದ್ರ ಸಚಿವ ಡಿ.ವಿ.ಎಸ್.

Update: 2018-11-22 12:42 GMT

ಮಂಗಳೂರು, ನ. 22: ಮಾಲಿನ್ಯ ನಿಯಂತ್ರಣದಲ್ಲಿ ನೈಸರ್ಗಿಕ ಇಂಧನದ ಕೊಡುಗೆ ಮಹತ್ತರವಾಗಿದ್ದು, ಪೈಪ್‌ಲೈನ್ ಮೂಲಕ ನೈಸರ್ಗಿಕ ಅನಿಲವನ್ನು ಪೂರೈಸುವ ಯೋಜನೆಯಿಂದ ಶೇ. 18ರಷ್ಟು ಮಾಲಿನ್ಯ ಕಡಿಮೆ ಆಗಲಿದೆ ಎಂದು ಕೇಂದ್ರದ ಅಂಕಿ ಅಂಶಗಳು, ಕಾರ್ಯಕ್ರಮ ಜಾರಿ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯನ್ನೊಳಗೊಂಡು ರಾಜ್ಯದ ಏಳು ಪ್ರದೇಶಗಳು ಸೇರಿದಂತೆ ದೇಶದ ಒಟ್ಟು 63 ಕಡೆಗಳಲ್ಲಿ ಮನೆ ಮನೆಗಳಿಗೆ ಪೈಪ್‌ಲೈನ್ ಮೂಲಕ ನೈಸರ್ಗಿಕ ಸಂಪರ್ಕ ಕಲ್ಪಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ನೆರವೇರಿಸಿದ್ದು, ನಗರದ ಪುರಭವನದಲ್ಲಿ ನಡೆದ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಕೇಂದ್ರ ಸಚಿವ ಡಿ.ವಿ. ಸದಾಂದ ಗೌಡ ಉದ್ಘಾಟಿಸಿ ಮಾತನಾಡಿದರು.

ಅಭಿವೃದ್ಧಿ ಮತ್ತು ಸುಶಾಸನ ಪ್ರಜಾಪ್ರಭುತ್ವದ ಪ್ರಮುಖ ಅಡಿಗಲ್ಲು. ಈ ಅಭಿವೃದ್ಧಿ ಪರಿಸರ ಸ್ನೇಹಿಯಾಗಬೇಕೆಂಬ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೈಸರ್ಗಿಕ ಅನಿಲ ಪೂರೈಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಆ ನಿಟ್ಟಿನಲ್ಲಿ 129 ಜಿಲ್ಲೆಗಳ ವ್ಯಾಪ್ತಿಯ 65 ಭೌಗೋಳಿಕ ಪ್ರದೇಶ ಗಳಲ್ಲಿ 9ನೆ ನಗರ ಅನಿಲ ವಿತರಣಾ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಈ ನೈಸರ್ಗಿಕ ಇಂಧನ ವ್ಯವಸ್ಥೆಯಿಂದಾಗಿ ದೇಶದ ಆರ್ಥಿಕ ಅಭಿವೃದ್ಧಿಯ ಜತೆಗೆ ಜನಸಾಮಾನ್ಯರ ಜೀವನ ಮಟ್ಟದಲ್ಲೂ ಸುಧಾರಣೆಯಾಗಲಿದೆ ಎಂದು ಅವರು ಹೇಳಿದರು.

9ನೆ ಬಿಡ್ಡಿಂಗ್ ಸುತ್ತಿನಲ್ಲಿ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಪೈಪ್‌ಲೈನ್ ಮೂಲಕ ಅನಿಲ ವಿತರಣಾ ವ್ಯವಸ್ಥೆ ಆಗಲಿದ್ದು, 10ನೆ ಬಿಡ್ಡಿಂಗ್ ಸುತ್ತಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೈಪ್‌ಲೈನ್ ಅನಿಲ ವಿತರಣೆಯಾಗಲಿದೆ ಎಂದು ಕೇಂದ್ರ ಸಚಿ ಡಿ.ವಿ. ಸದಾನಂದ ಗೌಡ ತಿಳಿಸಿದರು.

ಸಂಸದ ನಳಿನ್ ಕುಮಾರ್ ಮಾತನಾಡಿ, ದಕ್ಷಿಣ ಕನ್ನಡದಲ್ಲಿ ಒಟ್ಟು 3.50 ಲಕ್ಷ ಮನೆಗಳಿಗೆ ಗ್ಯಾಸ್ ಸಂಪರ್ಕ, 100 ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಕೇಂದ್ರಗಳನ್ನು ಸ್ಥಾಪಿಸಲು ಮುಂದಿನ 8 ವರ್ಷಗಳ ಗುರಿ ನಿಗದಿಗೊಳಿಸಲಾಗಿದೆ. ಈ ಮೂಲಕ ದ.ಕ. ಜಿಲ್ಲೆ ಹೊಗೆಮುಕ್ತ ಜಿಲ್ಲೆಯಾಗಿ ಪರಿವರ್ತನೆಗೊಳ್ಳಲಿದೆ ಎಂದರು.

ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ ಮೊಯ್ಲಿ, ಅಪರ ಜಿಲ್ಲಾಧಿಕಾರಿ ಕುಮಾರ್, ಗೇಲ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಮುರುಗೇಶನ್, ಉಪಸ್ಥಿತರಿದ್ದರು. ಗೇಲ್ ಕಂಪನಿಯ ಮುಖ್ಯ ಮಹಾಪ್ರಬಂಧಕ ವಿವೇಕ್ ವಾತೋಡ್ಕರ್ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಪರಿಸರ ಸ್ನೇಹಿ ಇಂಧನ ಬಳಕೆಗೆ ಆದ್ಯತೆ: ಪ್ರಧಾನಿ ಮೋದಿ

ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಶಂಕುಸ್ಥಾಪನಾ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಕಾರ್ಯಕ್ರಮದಲ್ಲಿ ಬೃಹತ್ ಪರದೆಯ ಮೂಲಕ ವ್ಯವಸ್ಥೆ ಮಾಡಲಾಯಿತು. ರಾಷ್ಟ್ರ ಮಟ್ಟದಲ್ಲಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ಆರ್ಥಿಕತೆಯು ಬೆಳೆಯುತ್ತಿರುವಂತೆಯೇ ಇಂಧನ ಬೇಡಿಕೆಯೂ ಹೆಚ್ಚಾಗಿದೆ. ಇದನ್ನು ನೀಗಿಸಲು ಪರಿಸರಕ್ಕೆ ಹೆಚ್ಚಿನ ಹಾನಿಯಾಗದಂತೆ ನೈಸರ್ಗಿಕ ಇಂಧನದ ಬಳಕೆ ಹೆಚ್ಚಿಸಬೇಕಾಗಿದೆ. ನೈಸರ್ಗಿಕ ಅನಿಲ ಆಧಾರಿತ ಆರ್ಥಿಕತೆಗೆ ಕೇಂದ್ರ ಸರಕಾರ ಒತ್ತು ನೀಡುತ್ತಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News