ಜನಾಗ್ರಹ ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ಪ್ರಯಾಣ: ದ.ಕ.ಬಸ್ ಮಾಲಕರ ಸಂಘದ ‘ನಡೆ’ಗೆ ವ್ಯಾಪಕ ಆಕ್ರೋಶ

Update: 2018-11-22 12:58 GMT

ಮಂಗಳೂರು, ನ.22:ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ನ. 25ರಂದು ನಗರದ ನೆಹರೂ ಮೈದಾನದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ವತಿಯಿಂದ ನಡೆಯುವ ಜನಾಗ್ರಹ ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ದ.ಕ.ಜಿಲ್ಲಾ ಬಸ್ ಮಾಲಕರ ಸಂಘವು ಬಸ್ ಮಾಲಕರು, ಚಾಲಕರು, ನಿರ್ವಾಹಕರಿಗೆ ನಿರ್ದೇಶನ ನೀಡಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಬಸ್ ಮಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದ ಶಾಸಕ ವೇದವ್ಯಾಸ ಕಾಮತ್ ನ. 25ರಂದು ನಡೆಯುವ ಸಮಾವೇಶದಲ್ಲಿ ಭಾಗವಹಿಸುವವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದರು. ಅದರಂತೆ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಕಾಶ ಶೇಖ ಅವರು ಪತ್ರವೊಂದನ್ನು ಬರೆದು ಬಸ್ ಮಾಲಕರು, ಚಾಲಕರು, ನಿರ್ವಾಹಕರಿಗೆ ‘ಜನಾಗ್ರಹ ಸಭೆಯಲ್ಲಿ ಪಾಲ್ಗೊಳ್ಳುವವರನ್ನು ಉಚಿತವಾಗಿ ಕರೆದೊಯ್ಯುವಂತೆ ನಿರ್ದೇಶನ ನೀಡಿದ್ದಾರೆ.

ಮಾಲಕರ ಸಂಘದ ಈ ‘ನಡೆ’ಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಅಲ್ಲದೆ ಆಕ್ರೋಶವೂ ವ್ಯಕ್ತವಾಗುತ್ತಿದೆ. ಮಾಲಕರ ಸಂಘವು ಈ ಹಿಂದೆಯೂ ಹಿಂದುತ್ವವಾದಿ ಸಂಘಟನೆಗಳ ಬಂದ್ ಕರೆಗೆ ಸ್ಪಂದಿಸಿ ಬಸ್ ಓಡಾಟ ಸ್ಥಗಿತಗೊಳಿಸುವ ಮೂಲಕ ಬಂದ್‌ಗೆ ಪರೋಕ್ಷ ಬೆಂಬಲ ಸೂಚಿಸುತ್ತಿತ್ತು. ಇದೀಗ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಿ ಎಂದು ನಿರ್ದೇಶಿಸುವ ಮೂಲಕ ಹಿಂದುತ್ವವಾದಿ ಸಂಘಟನೆಗಳ ಕಾರ್ಯಚಟುವಟಿ ಕೆಗೆ ಬಹಿರಂಗವಾಗಿ ಬೆಂಬಲ ನೀಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಡಿವೈಎಫ್‌ಐ: ಚುನಾವಣೆ ಸಮೀಪಿಸುವಾಗ ಬಿಜೆಪಿ ಮತ್ತು ಸಂಘ ಪರಿವಾವು ಕೋಮುಧ್ರುವೀಕರಣಕ್ಕೆ ಯತ್ನಿಸುವುದು ಅವರ ರಾಜಕೀಯ ಕಾರ್ಯತಂತ್ರದ ಭಾಗವಾಗಿದೆ. ಆ ಅಜೆಂಡಾದ ಭಾಗವಾಗಿಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ನ. 25ರಂದು ಮಂಗಳೂರಿನಲ್ಲಿ ಸಮಾವೇಶ ಹಮ್ಮಿಕೊಂಡಿದ್ದಾರೆ. ಇದು ಪಕ್ಕಾ ರಾಜಕೀಯ ಕಾರ್ಯಕ್ರಮವಾಗಿದೆ. ಅದರಲ್ಲೂ ಮತೀಯ ದ್ವೇಷ ಹೆಚ್ವಿಸುವ ಉದ್ದೇಶವೂ ಅಡಗಿದೆ. ಇಂತಹ ಒಂದು ರಾಜಕೀಯ, ವಿಭಜಕ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕರ ಸೂಚನೆಯಂತೆ ದ.ಕ. ಜಿಲ್ಲೆಯ ಸಾರ್ವಜನಿಕ ಸಾರಿಗೆ ಸೇವೆಯಲ್ಲಿರುವ ಖಾಸಗಿ ಬಸ್ ಮಾಲಕರ ಸಂಘವು ಉಚಿತ ಬಸ್ ಸೇವೆ ಒದಗಿಸಲು ತೀರ್ಮಾನಿಸಿರುವುದು ಖಂಡನೀಯ. ತನ್ನ ವ್ಯಾಪ್ತಿಯ ಬಸ್ ಮಾಲಕರಿಗೆ ಉಚಿತ ಸೇವೆ ಒದಗಿಸುವಂತೆ ನೋಟಿಸ್ ಮೂಲಕ ನಿರ್ದೇಶನ ನೀಡಿರುವುದು ಆಘಾತಕಾರಿ ವಿಷಯವಾಗಿದೆ. ಎಲ್ಲಾ ಜಾತಿ, ಧರ್ಮಗಳಿಗೆ ಸೇರಿದ ಜನವಿಭಾಗಗಳ ಪ್ರಯಾಣಿಕರ ಸೇವೆಗಾಗಿರುವ ಖಾಸಗಿ ಬಸ್ ಸೇವೆ ಈ ರೀತಿ ಧಾರ್ಮಿಕ ದ್ವೇಷದ ರಾಜಕಾರಣದ ಭಾಗವಾಗುವುದು ಮತ್ತು ಉಚಿತ ಸೇವೆ ಒದಗಿಸುವ ನಿಲುವು ಒಪ್ಪತಕ್ಕದ್ದಲ್ಲ. ಹಾಗಾಗಿ ಜಿಲ್ಲೆಯ ನ್ಯಾಯಪ್ರಿಯ ಜನತೆ ಬಸ್ ಮಾಲಕರ ಸಂಘದ ಈ ನಡೆಯ ವಿರುದ್ಧ ಧ್ವನಿ ಎತ್ತಬೇಕಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.

ಮುಸ್ಲಿಂ ವರ್ತಕರ ಸಂಘ: ಬಸ್ ಮಾಲಕರ ಸಂಘದ ಈ ನಡೆ ಕಾನೂನು ಬಾಹಿರವಾಗಿದೆ. ಇದರಿಂದ ಜನಸಾಮಾನ್ಯರು ಅಂದು ಬಸ್ಸಿನಲ್ಲಿ ಪ್ರಯಾಣಿಸಲು ಸಮಸ್ಯೆಯಾಗಬಹುದು. ಸಂಘಪರಿವಾರದ ಅನತಿಯಂತೆ ನಡೆಯುವ ಬಸ್ ಮಾಲಕರ ಸಂಘದ ಪದಾಧಿಕಾರಿಗಳು ಮುಂದೊಂದು ದಿನ ಇತರ ಸಂಘಟನೆ ಗಳು ಕೂಡ ಇದೇ ರೀತಿ ಮನವಿ ಮಾಡಿದರೆ ಸ್ಪಂದಿಸುವರೇ? ಆವಾಗ ಕೂಡ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಡುವರೇ ? ಎಂದು ಮುಸ್ಲಿಂ ವರ್ತಕರ ಸಂಘದ ಅಧ್ಯಕ್ಷ ಅಲಿ ಹಸನ್ ಪ್ರಶ್ನಿಸಿದ್ದಾರೆ.

ಪ್ರಯಾಣಿಕರಿಗೆ ತೊಂದರೆಯಾಗುವುದಿಲ್ಲ: ದಿಲ್‌ರಾಜ್ ಆಳ್ವ

ಶಾಸಕ ವೇದವ್ಯಾಸ ಕಾಮತ್‌ರ ಮನವಿಯ ಮೇರೆಗೆ ನ. 25ರಂದು ನಡೆಯುವ ಜನಾಗ್ರಹ ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಲು ಬಸ್ ಮಾಲಕರಲ್ಲಿ ವಿನಂತಿಸಲಾಗಿದೆ. ಇದೇನು ಹೊಸತೇನೂ ಅಲ್ಲ. ಈ ಹಿಂದೆಯೂ ಇಂತಹ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಇದೀಗ ಯಾಕೆ ಇಷ್ಟೊಂದು ಚರ್ಚೆಯಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ. ಅಂದು ನಾವು ಯಾವ ರೂಟ್‌ನ ಬಸ್‌ಗಳ ಟ್ರಿಪ್‌ಗಳನ್ನೂ ಕಡಿತಗೊಳಿಸುತ್ತಿಲ್ಲ. ಜನಾಗ್ರಹ ಸಭೆಯಲ್ಲಿ ಪಾಲ್ಗೊಳ್ಳುವವರನ್ನು ಉಚಿತವಾಗಿ ಕರೆದೊಯ್ಯಲು ಮಾತ್ರ ಸೂಚಿಸಲಾಗಿದೆ ಎಂದು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ‘ವಾರ್ತಾಭಾರತಿ’ಗೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News