×
Ad

ಓಲಾ ಸೇವೆ ಆರಂಭ; ಆನ್‌ಲೈನ್ ಚಾಲಕರಿಂದ ಸಂಭ್ರಮಾಚರಣೆ

Update: 2018-11-22 19:47 IST

ಮಂಗಳೂರು, ನ. 22: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಓಲಾ ಆನ್‌ಲೈನ್ ಟ್ಯಾಕ್ಸಿ ಸೇವೆಯು ಗುರುವಾರ ಅಧಿಕೃತವಾಗಿ ಆರಂಭ ಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ಆನ್‌ಲೈನ್ ಟ್ಯಾಕ್ಸಿ ಚಾಲಕರು ಸಂಭ್ರಮಾಚರಣೆ ನಡೆಸಿದರು.

‘ಕಳೆದ ಮೂರು ವರ್ಷಗಳಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಓಲಾ ಪಿಕ್‌ಅಪ್ ಮಾಡಲು ವಿಮಾನ ನಿಲ್ದಾಣದ ಪ್ರೀಪೇಯ್ಡಾ ಟ್ಯಾಕ್ಸಿಯವರ ಮಧ್ಯೆ ನಡೆಯುತ್ತಿದ್ದ ಜಿದ್ದಾಜಿದ್ದಿಯ ಸಂಘರ್ಷದಲ್ಲಿ ಆನ್‌ಲೈನ್ ಟ್ಯಾಕ್ಸಿ ಚಾಲಕರು ಮೇಲುಗೈ ಸಾಧಿಸಿದ್ದಾರೆ’ ಎಂದು ದ.ಕ. ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಚಾಲಕರು- ಮಾಲಕರ ಅಸೋಸಿಯೇಶನ್ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ತಿಳಿಸಿದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಲ್ಲಿ ದೇಶದ ಎಲ್ಲ 10 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆ್ಯಪ್ ಆಧಾರಿತ ರೇಡಿಯೋ ಟ್ಯಾಕ್ಸಿ ಸೇವೆ ಆರಂಭಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಜಾರಿಯಾಗುವಂತೆ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವು ಆ್ಯಪ್ ಆಧಾರಿತ ಕಂಪೆನಿಗಳಿಂದ ಟೆಂಡರಿಗೆ ಆಹ್ವಾನಿಸಿತ್ತು. ಅದರಂತೆ ಓಲಾ ಕಂಪೆನಿಗೆ ನ.19ರಿಂದ ಮುಂದಿನ ಮೂರು ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ ಎಂದರು.

ಅಲ್ಲದೆ, ಅನುಕಂಪದ ಆಧಾರದಲ್ಲಿ ವಿಮಾನ ನಿಲ್ದಾಣದಲ್ಲಿರುವ ಪ್ರೀಪೇಯ್ಡಾ ಟ್ಯಾಕ್ಲಿಯವರಿಗೂ ಮೂರು ವರ್ಷದ ಅವಧಿಗೆ ಅನುಮತಿಯನ್ನು ಪ್ರಾಧಿಕಾರದ ನಿರ್ದೇಶಕರ ವಿವೇಚನೆಗೊಳಪಟ್ಟು ಗುತ್ತಿಗೆಯನ್ನು ನೀಡಲಾಗಿದೆ. ಇದರೊಂದಿಗೆ ದೇಶದ 10 ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಆರಂಭಿಸಿದಂತಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಜಿಲ್ಲಾ ಆನ್‌ಲೈನ್ ಟ್ಯಾಕ್ಸಿ ಚಾಲಕರು- ಮಾಲಕರ ಅಸೋಸಿಯೇಶನ್ ಅಧ್ಯಕ್ಷ ಸತ್ಯೇಂದ್ರ ಶೆಟ್ಟಿ, ಉಪಾಧ್ಯಕ್ಷ ಮುನಾವರ್, ಓಲಾ ಕಂಪೆನಿಯ ಕಾನೂನು ಸಲಹೆಗಾರ ಕಮರುದ್ದೀನ್, ಓಲಾ ಕಂಪೆನಿಯ ಮಂಗಳೂರು ವಿಭಾಗೀಯ ಅಧಿಕಾರಿಗಳಾದ ಸುಜಿತ್ ಕುಂದರ್, ಗೋಪಾಲಕೃಷ್ಣ ಉಪಾಧ್ಯಾಯ, ರಾಕೇಶ್‌ಕುಮಾರ್, ಆನ್‌ಲೈನ್ ಟ್ಯಾಕ್ಸಿ ಸಂಘದ ಪ್ರಮುಖರಾದ ವೈ.ಶಿವ, ವಾಜಿದ್ ಪಾಂಡೇಶ್ವರ, ಸಾದಿಕ್ ಕಣ್ಣೂರು, ನೌಷಾದ್, ಆಕಾಶ್ ಪವನ್, ಸಲ್ಮಾನ್, ಶಾಕಿರ್, ಜಲೀಲ್ ಮತ್ತು ಆನ್‌ಲೈನ್ ಟ್ಯಾಕ್ಸಿ ಚಾಲಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News