ರಾಮಮಂದಿರ ನಿರ್ಮಾಣ ಜನಾಗ್ರಹ ಸಭೆಗೆ ಅನುಮತಿ ಖಂಡನೀಯ: ಎಸ್‌ಡಿಪಿಐ
ಮಂಗಳೂರು, ನ.22: ರಾಮ ಮಂದಿರ ನಿರ್ಮಾಣಕ್ಕಾಗಿ ನ.25ರಂದು ಮಂಗಳೂರಿನಲ್ಲಿ ಜನಾಗ್ರಹ ಸಭೆ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅವಕಾಶ ನೀಡಿರುವ ನಿಲುವನ್ನು ಎಸ್‌ಡಿಪಿಐ ಖಂಡಿಸಿದೆ.
ಸಂಘ ಪರಿವಾರವು ದೇಶದಲ್ಲಿ ಮಹಾತ್ಮಾ ಗಾಂಧಿಯನ್ನು ಕೊಂದ ನಂತರ ಬಾಬರಿ ಮಸೀದಿಯನ್ನು ಕೆಡವಿದ್ದುದು ಎರಡನೇ ಭಯೋತ್ಪಾದನಾ ಕೃತ್ಯ ವಾಗಿದೆ. ಈ ಕುರಿತ ಪ್ರಕರಣ ಇದುವರೆಗೆ ಇತ್ಯರ್ಥವಾಗದೆ ಸಮಸ್ಯೆಯಲ್ಲಿರುವಾಗ ಮತ್ತೆ ರಾಮಮಂದಿರ ನಿರ್ಮಾಣಕ್ಕಾಗಿ ಜನಾಗ್ರಹ ಸಭೆ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಹೇಗೆ ಅವಕಾಶ ನೀಡಿತು ಎಂದು ಎಸ್‌ಡಿಪಿಐ ಪ್ರಶ್ನಿಸಿದೆ.
ಕಳೆದ ನಾಲ್ಕೂವರೆ ವರ್ಷಗಳಿಂದ ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ದೇಶವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತಿಲ್ಲ. ಜನರು ಬಿಜೆಪಿಯ ವಿರುದ್ಧ ನಿಲ್ಲುವ ಸಂದರ್ಭದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಭಾವನಾತ್ಮಕ ವಿಚಾರವನ್ನು ಮುಂದಿಟ್ಟು ಕೋಮು ಧ್ರುವೀಕರಣಕ್ಕೆ ಮುಂದಾಗಿವೆ. ರಾಮ ಮಂದಿರ ನಿರ್ಮಾಣದ ಜನಾಗ್ರಹ ಕಾರ್ಯಕ್ರಮದ ಮೂಲಕ ಮುಂದಿನ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ.
ಮಂಗಳೂರು ನಗರದಲ್ಲಿ ಸರಕಾರಿ ಬಸ್‌ಗಳ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸಹಕಾರ ಆಗುವಂತೆ ಹೆಚ್ಚಿನ ಸರಕಾರಿ ಬಸ್‌ಗಳನ್ನು ನಿಯೋಜಿಸಬೇಕು. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಈ ವಿವಾದಿತ ವಿಚಾರದ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದೆಂದು ಎಸ್‌ಡಿಪಿಐನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಎಸ್.ಎಚ್. ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
‘ಖಾಸಗಿ ಸಿಟಿ ಬಸ್ ಮಾಲಕರ ಸಂಘದ ನಿರ್ಧಾರ ಖಂಡನೀಯ’
ಮಂಗಳೂರಿನಲ್ಲಿ ನಡೆಸುವ ವಿವಾದಿತ ವಿಚಾರದ ಕಾರ್ಯಕ್ರಮಕ್ಕೆ ಖಾಸಗಿ ಬಸ್‌ಗಳನ್ನು ಉಚಿತವಾಗಿ ನೀಡಲು ಹೊರಟಿರುವ ಖಾಸಗಿ ಸಿಟಿ ಬಸ್ ಮಾಲಕರ ಸಂಘದ ನಿರ್ಧಾರ ಖಂಡನೀಯ. ಖಾಸಗಿ ಬಸ್ ಸಂಘದ ಈ ತೀರ್ಮಾನವು ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದು, ಈ ಮೊದಲೇ ಕೋಮು ಸೂಕ್ಷ್ಮ ಪ್ರದೇಶವಾಗಿರುವ ದ.ಕ. ಜಿಲ್ಲೆಯಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಧರ್ಮ ಮತ್ತು ಜಾತಿಯ ಹೆಸರಲ್ಲಿ ರಾಜಕೀಯ ಮಾಡಲು ಹೊರಟಿವೆ. ಇದು ಜಿಲ್ಲೆಯ ಶಾಂತಿ, ಸೌಹಾರ್ದ ಕೆಡಿಸುವ ಷಡ್ಯಂತ್ರವಾಗಿದೆ. ಇದಕ್ಕೆ ಬಸ್ ಮಾಲಕರ ಸಂಘ ಬೆಂಬಲ ನೀಡಿದಂತಾಗಿದೆ ಎಂದು ಎಸ್‌ಡಿಪಿಐ ತಿಳಿಸಿದೆ.