ಕೆಲಸ ನಿರಾಕರಣೆ, ಸಂಬಳ ನೀಡದ ಆರೋಪ: ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರ ಕಚೇರಿಗೆ ಮುತ್ತಿಗೆ
ಮಂಗಳೂರು, ನ.22: ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರನ್ನು ವಿನಾಃ ಕಾರಣ ಕೆಲಸದಿಂದ ವಜಾ ಮಾಡಿದ್ದನ್ನು ಮತ್ತು ಕಾರ್ಮಿಕರಿಗೆ ಸಂಬಳ ನೀಡದೆ ಸತಾಯಿಸುತ್ತಿರುವ ಸಾಯಿ ಸೆಕ್ಯುರಿಟಿ ಸಂಸ್ಥೆ ಹಾಗೂ ಜಿಲ್ಲಾ ಅಧೀಕ್ಷಕರ ಸರ್ವಾಧಿಕಾರಿ ಧೋರಣೆ ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಗುತ್ತಿಗೆ ಕಾರ್ಮಿಕರಿಂದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರ ಕಚೇರಿಗೆ ಗುರುವಾರ ಮುತ್ತಿಗೆ ಹಾಕಲಾಯಿತು.
ಈ ಸಂದರ್ಭ ಮಾತನಾಡಿದ ಸಿಐಟಿಯು ದ.ಕ.ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಲೈಸನ್ಸ್ ಪಡೆಯದೆ ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ವಹಿಸಿದ ಸಾಯಿ ಸೆಕ್ಯುರಿಟಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿರುವುದು ಹೇಗೆ? ಇಲ್ಲಿನ ಗುತ್ತಿಗೆ ಕಾರ್ಮಿಕರನ್ನು ಗುಲಾಮರಂತೆ ದುಡಿಸಿ ಕಾನೂನುಬದ್ಧ ಸವಲತ್ತುಗಳನ್ನು ನೀಡದೆ ವಂಚಿಸುತ್ತಿರುವ ಸಾಯಿ ಸೆಕ್ಯುರಿಟಿ ಸಂಸ್ಥೆ ಒಂದು ಕಡೆಯಾದರೆ ಮತ್ತೊಂದು ಕಡೆ ಜಿಲ್ಲಾ ಅಧೀಕ್ಷಕರ ಸರ್ವಾಧಿಕಾರಿ ಧೋರಣೆ ಹಾಗೂ ದಬ್ಬಾಳಿಕೆಗಳಿಂದ ಇಲ್ಲಿನ ಕಾರ್ಮಿಕರು ದುಡಿಯಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರಲ್ಲದೆ, ಕಾರ್ಮಿಕರ ದುಡಿಮೆಯ ಸಂಬಳವನ್ನು ನೀಡದೆ ಸತಾಯಿಸುವುದನ್ನು ಕೈಬಿಟ್ಟು ತಕ್ಷಣ ಅವರಿಗೆ ಸಂಬಳ ನೀಡಬೇಕು ಮತ್ತು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಮಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಹಲವಾರು ಹಗರಣಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ವೆನ್ಲಾಕ್ ಅಧಿಕಾರಿಗಳನ್ನು ಹಾಗೂ ಸಾಯಿ ಸೆಕ್ಯುರಿಟಿ ಸಂಸ್ಥೆಯ ಸುಪರ್ ವೈಸರನ್ನು ಕರೆಸಿ ಮಾತುಕತೆ ನಡೆಸಿದರು. ಬಾಕಿ ಇರಿಸಿದ ಸಂಬಳವನ್ನು ತುರ್ತಾಗಿ ನೀಡಬೇಕು, ಇಲ್ಲದಿದ್ದಲ್ಲಿ ದಂಡ ಸಮೇತ ವಸೂಲಿ ಮಾಡಲಾಗುವುದು ಎಂದು ತಾಕೀತು ಮಾಡಿದರು. ಕೆಲಸ ನಿರಾಕರಣೆ ಮಾಡಿದ ಕಾರ್ಮಿಕರ ಬಗ್ಗೆ ಮೇಲಾಧಿಕಾರಿಗೆ ತಿಳಿಸಿ ಕೂಡಲೇ ಸಭೆ ಕರೆಯುವುದಾಗಿ ಭರವಸೆ ನೀಡಿದರು.
ಕಾರ್ಮಿಕ ಮುಖಂಡರಾದ ಹೇಮಾವತಿ, ಸುನೀತಾ, ಶಾಂತಾ,ಗೀತಾ, ಪ್ರೇಮಾ,ನಾಗರಾಜ್, ದೀಪಕ್,ಇಮ್ದಾದ್, ಲತೀಫ್, ಪ್ರವೀಣ್, ಕರುಣಾಕರ್ ಮುಂತಾದವರು ವಹಿಸಿದ್ದರು.