×
Ad

ಕಲ್ಯಾಣ್ ಸಿಂಗ್ ಸರಕಾರದ ಅನುಕೂಲಕರ ವಾತಾವರಣದಿಂದ ಬಾಬರಿ ಮಸೀದಿ ಧ್ವಂಸ ನಿರಾತಂಕ: ಪೇಜಾವರ ಸ್ವಾಮೀಜಿ

Update: 2018-11-23 20:11 IST

ಉಡುಪಿ, ನ. 23: ಬಾಬರಿ ಮಸೀದಿಯನ್ನು ಧ್ವಂಸ ಮಾಡುತ್ತಿರುವಾಗ ಕ್ರಮ ಕೈಗೊಳ್ಳುತ್ತಿದ್ದರೆ ನೂರಾರು ಮಂದಿ ಸಾಯುತ್ತಿದ್ದರು, ಅದಕ್ಕಾಗಿ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ಆಗಿನ ಪ್ರಧಾನಿ ಪಿ.ವಿ. ನರಸಿಂಹ ರಾವ್ ನಮ್ಮಲ್ಲಿ ಹೇಳಿದ್ದರು. ಅದೇ ರೀತಿ ಉತ್ತರ ಪ್ರದೇಶದ ಆಗಿನ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಕೂಡ ಇದಕ್ಕೆ ಅನುಕೂಲವೇ ಮಾಡಿ ಕೊಟ್ಟರು. ಇದರಿಂದಾಗಿ ಬಾಬರಿ ಮಸೀದಿ ಧ್ವಂಸ ನಿರಾತಂಕವಾಗಿ ನಡೆಯಿತು ಎಂದು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ರಾಮಮಂದಿರದ ನಿರ್ಮಾಣಕ್ಕೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಮಸೂದೆ ಮಂಡಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡಿರುವ ಜನಾಗ್ರಹ ಸಭೆಗೆ ಪೂರ್ವಭಾವಿಯಾಗಿ ಶುಕ್ರವಾರ ಶ್ರೀಕೃಷ್ಣ ಮಠದ ಆವರಣದಲ್ಲಿರುವ ನ್ಯೂ ಯಾತ್ರಿ ನಿವಾಸದ ಕಾರ್ಯಾಲಯದಲ್ಲಿ ಅಯೋಧ್ಯೆಯ ಕರಸೇವೆಯಲ್ಲಿ ಭಾಗವಹಿಸಿದ ಹಿರಿಯರಿಗೆ ಸನ್ಮಾನ ನೆರೇರಿಸಿ ಅವರು ಮಾತನಾಡುತಿದ್ದರು.

ಬಾಬರಿ ಮಸೀದಿಯನ್ನು ಬಲಾತ್ಕಾರವಾಗಿ ಕೆಡವಿ ಹಾಕುವುದಕ್ಕೆ ನನ್ನ ಒಪ್ಪಿಗೆ ಇರಲಿಲ್ಲ. ಸರಕಾರಕ್ಕೆ ಲಿಖಿತವಾಗಿ ಹೇಳಿರುವುದರಿಂದ ಮಸೀದಿ ಧ್ವಂಸ ಗೊಳಿಸುವ ಯೋಜನೆ ಮಾಡಿರಲಿಲ್ಲ. ಆದರೆ ಕರಸೇವಕರು ನಿರ್ಣಯ ಮೀರಿ ಆಕ್ರಮಣ ಮಾಡಿ ಧ್ವಂಸಗೊಳಿಸಿದರು. ಧ್ವಂಸ ಆಗುವುದು ಸೂಕ್ತವೇ ಆಗಿತ್ತು. ಆದರೆ ನಾವು ಕೊಟ್ಟ ಮಾತಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿರುವುದು ಸರಿಯಲ್ಲ ಎಂದರು.

ಆ ಸಂದರ್ಭದಲ್ಲಿ ಮಸೀದಿ ಧ್ವಂಸ ಕಾರ್ಯಕ್ಕೆ ಇಳಿಯಬಾರದು ಎಂದು ಹೇಳಿದರೂ ನನ್ನ ಮಾತಿಗೆ ಯಾರು ಬೆಲೆ ಕೊಡಲಿಲ್ಲ. ಜನರ ಉತ್ಸಾಹದ ಎದುರು ನನ್ನ ಪ್ರಯತ್ನ ವಿಫಲವಾಯಿತು. ಧ್ವಂಸ ಆಗುವಾಗ ನಾನು ಮೂಕ ಪ್ರೇಕ್ಷಕನಾಗಿದ್ದೆ. ನಾನು  ಧ್ವಂಸಕ್ಕೆ ಹೋಗಿರಲಿಲ್ಲ. ಆದರೆ ಕೊನೆಗೆ ನನಗೆ ಅಲ್ಲಿ ಮಂದಿರ ಇರುವುದು ಮನವರಿಕೆಯಾಯಿತೆಂದು ಸ್ವಾಮೀಜಿ ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ಕರಸೇವಕರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಆರೆಸ್ಸೆಸ್ ಹಿರಿಯ ಸೋಮಶೇಖರ್ ಭಟ್, ಬಜರಂಗದಳ ಸಂಚಾಲಕ ಜಿಲ್ಲಾ ದಿನೇಶ್ ಮೆಂಡನ್ ಉಪಸ್ಥಿತರಿದ್ದರು.

ಬಜರಂಗದಳ ದಕ್ಷಿಣ ಪ್ರಾಂತೀಯ ಸಂಚಾಲಕ ಸುನೀಲ್ ಕೆ.ಆರ್. ಪ್ರಾಸ್ತಾ ವಿಕವಾಗಿ ಮಾತನಾಡಿದರು. ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ಸ್ವಾಗತಿಸಿದರು. ನಗರ ಅಧ್ಯಕ್ಷ ಸಂತೋಷ್ ಸುವರ್ಣ ಬೊಳ್ಜೆ ವಂದಿಸಿದರು. ಭಾಗ್ಯಶ್ರೀ ಐತಾಳ್ ಕಾರ್ಯಕ್ರಮ ನಿರೂಪಿಸಿದರು.

ಮೊಯ್ಲಿ ಬಂಧಿಸುವ ಸಾಹಸ ಮಾಡಿಲ್ಲ

ಬಾಬರಿ ಮಸೀದಿ ಧ್ವಂಸದ ವಿಚಾರದಲ್ಲಿ ಮುಸ್ಲಿಮರು ಅಸಮಾಧಾನಪಡಲು ಅಲ್ಲಿ ಕಾರಣವೇ ಇರಲಿಲ್ಲ. ಯಾಕೆಂದರೆ ಆ ಸ್ಥಳದಲ್ಲಿ ಮಂದಿರ ಇದ್ದಿರುವುದಕ್ಕೆ ಸ್ಪಷ್ಟ ಆಧಾರಗಳಿದ್ದವು. ಈ ಬಗ್ಗೆ ಹೇಳಿಕೆ ಕೊಟ್ಟ ನನ್ನನ್ನು ಬಂಧಿಸಲು ತುಂಬಾ ಪ್ರಯತ್ನಗಳು ನಡೆದವು. ಆಗ ನಾನು ಕೂಡ ಬಂಧನಕ್ಕೆ ಸಿದ್ಧನಾಗಿದ್ದೆ. ಆದರೆ ಆಗಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ನನ್ನ ಬಂಧಿಸುವ ಸಾಹಸ ಮಾಡಿರಲಿಲ್ಲ ಎಂದು ಪೇಜಾವರ ಶ್ರೀ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News