×
Ad

ಕೊಲೆಯತ್ನ ಪ್ರಕರಣ: ಮೂವರು ಅಪರಾಧಿಗಳಿಗೆ 5 ವರ್ಷ ಕಠಿಣ ಶಿಕ್ಷೆ

Update: 2018-11-23 20:54 IST

ಮಂಗಳೂರು, ನ.23: ಸಾಲವಾಗಿ ಪಡೆದ ಹಣವನ್ನು ಹಿಂತಿರುಗಿಸುವಂತೆ ಕೇಳಿದ ಕಾರಣಕ್ಕಾಗಿ ಸ್ನೇಹಿತರ ಜತೆಗೂಡಿ ಕೊಲೆಗೆ ಯತ್ನಿಸಿದ ಆರೋಪ ಮಂಗಳೂರು ಪ್ರಧಾನ ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಮೂವರು ಅಪರಾಧಿಗಳಿಗೆ 5 ವರ್ಷ ಕಠಿಣ ಸಜೆ ಹಾಗೂ 5 ಸಾವಿರ ರೂ.ದಂಡ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ.

ಮಂಗಳೂರು ಬಜಾಲ್ ಗ್ರಾಮದ ಆದರ್ಶ ನಗರದ ಅರ್ಜುನ್, ಕುಡುಪು ಕಟ್ಟೆಯ ಬಳಿಯ ನಿವಾಸಿ ಅಭಿ ಯಾನೆ ಅಭಿಷೇಕ್ ಮತ್ತು ಶಕ್ತಿನಗರ ನೀತಿ ನಗರದ ಕಾರ್ತಿಕ್ ಅಪರಾಧಿಗಳು. ಐಪಿಸಿ ಸೆಕ್ಷನ್ 504ಗೆ 1 ವರ್ಷ ಸಾದಾ ಶಿಕ್ಷೆ, ಐಪಿಸಿ ಸೆಕ್ಷನ್ 506ಗೆ 2 ವರ್ಷ ಕಠಿಣ ಸಜೆ ವಿಧಿಸಿ ನ್ಯಾಯಾಧೀಶ ಕಡ್ಲೂರು ಸತ್ಯನಾರಾಯಣಾಚಾರ್ಯ ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಬೆಂಜನಪದವು ಸತೀಶ್ ಗಾಂಭೀರ್ ಅವರಿಂದ ಅರ್ಜುನ್ 25 ಲಕ್ಷ ರೂ. ಕೈ ಸಾಲ ಪಡೆದಿದ್ದ. ಆ ಹಣವನ್ನು ಹಿಂತಿರುಗಿಸುವಂತೆ ಹಲವು ಬಾರಿ ಸತೀಶ್ ಒತ್ತಾಯಿಸಿದ್ದರು. ಸತೀಶ್‌ನನ್ನು ಕೊಲೆ ಮಾಡಿದರೆ ಹಣ ನೀಡುವ ಅವಶ್ಯಕತೆ ಇಲ್ಲ ಎಂದು ಯೋಚಿಸಿದ ಅರ್ಜುನ್ ತನ್ನ ಸ್ನೇಹಿತರಾದ ಅಭಿಷೇಕ್ ಮತ್ತು ಕಾರ್ತಿಕ್ ಜತೆಗೂಡಿ ಪಂಪ್‌ವೆಲ್ ವೃತ್ತದಲ್ಲಿರುವ ಕಾಂಪ್ಲೆಕ್ಸ್‌ನಲ್ಲಿ 2017 ಜುಲೈ 14ರಂದು ಮಧ್ಯಾಹ್ನ 1:30ಕ್ಕೆ ಒಳಸಂಚು ರೂಪಿಸಿದ್ದರು.

ಸತೀಶ್ ಗಾಂಭೀರ್ ಕೆಲಸ ಮಾಡುವ ಅಡ್ಯಾರ್‌ನಲ್ಲಿರುವ ಸಹಕಾರ ಸಂಘಕ್ಕೆ ಸಂಜೆ 4:15ಕ್ಕೆ ತೆರಳಿದ ಅಭಿಷೇಕ್ ಮತ್ತು ಕಾರ್ತಿಕ್, ‘ಸಾಲದ ಹಣ ನೀಡುವುದಾಗಿ ಅರ್ಜುನ್ ಹೇಳಿದ್ದಾನೆ. ನಮ್ಮಾಂದಿಗೆ ಬಂದು ಹಣ ಪಡೆಯಲು ತಿಳಿಸಿದ್ದಾನೆ’ ಎಂದು ಹೇಳಿದ್ದಾರೆ. ಅವರ ಮಾತನ್ನು ನಿಜ ಎಂದು ನಂಬಿದ ಸತೀಶ್ ಗಾಂಭೀರ್, ಅಪರಾಧಿಗಳಿದ್ದ ಬೈಕನ್ನು ಹಿಂಬಾಲಿಸಿಕೊಂಡು ಹೋಗಿದ್ದಾರೆ. ಸಂಜೆ 5 ಗಂಟೆಗೆ ಪಡೀಲ್‌ನಿಂದ ಮರೋಳಿ ಕಡೆಗೆ ಹೋಗುವ ನಿಡ್ಡೇಲ್ ಎಂಬಲ್ಲಿ ಅಭಿಷೇಕ್ ಮತ್ತು ಕಾರ್ತಿಕ್ ಸೇರಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿ, ‘ಕೊಲೆ ಮಾಡದೆ ಬಿಡುವುದಿಲ್ಲ’ ಎನ್ನುತ್ತಾ ಚೂರಿಯಿಂದ ಇರಿದು ಸತೀಶ್‌ನನ್ನು ಕೊಲೆ ಮಾಡಲು ಯತ್ನಿಸಿದ್ದರು.

ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್‌ಸ್ಪೆಕ್ಟರ್ ರವಿ ನಾಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ 12 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದೆ. ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕುದ್ರಿಯ ಪುಷ್ಪರಾಜ ಅಡ್ಯಂತಾಯ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News