×
Ad

ಮಂಡ್ಯ ಅಪಘಾತ: ನಾಲೆಗೆ ಉರುಳಿದ ಬಸ್ಸು ಮಂಗಳೂರಿನಿಂದ ಮಾರಾಟವಾದದ್ದು

Update: 2018-11-24 20:19 IST

ಮಂಗಳೂರು, ನ. 24: ಪಾಂಡವಪುರ ತಾಲೂಕಿನ ನಾಲೆಯೊಂದಕ್ಕೆ ಉರುಳಿ ಬಿದ್ದು ಅಪಾರ ಸಾವು ನೋವಿಗೆ ಕಾರಣವಾದ ಬಸ್ಸು 2001ರಲ್ಲಿ ಮಂಗಳೂರು ನಗರ ವ್ಯಾಪ್ತಿಯಲ್ಲಿ ಆರ್‌ಟಿಒ ಕಚೇರಿಯಲ್ಲಿ ನೋಂದಣಿಯಾಗಿ ಪರವಾನಿಗೆ ಪಡೆದು ಓಡುತ್ತಿತ್ತು. ಹದಿನೈದು ವರ್ಷದ ಬಳಿಕ 2015ಲ್ಲಿ ಈ ಬಸ್ಸನ್ನು ಅದರ ಮಾಲಕ ಮಂಡ್ಯದ ನಿವಾಸಿಯೊಬ್ಬರಿಗೆ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಬಸ್ಸು ಅಲ್ಲಿ ಸಂಚಾರ ಮಾಡುತ್ತಿತ್ತು.

ಅದೇ ಬಸ್ಸು ನಾಲೆಗೆ ಉರುಳಿದೆ ಎನ್ನುವುದನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯ ಅಧ್ಯಕ್ಷತೆಯಲ್ಲಿರುವ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಈ ಹಿಂದೆ ತೆಗೆದುಕೊಂಡ ನಿರ್ಣಯದ ಪ್ರಕಾರ ಜಿಲ್ಲೆಯಲ್ಲಿ 15 ವರ್ಷ ಸಂಚಾರ ಮಾಡಿದ ವಾಹನ ಮತ್ತೆ ಓಡುವಂತಿಲ್ಲ. ಆ ಕಾರಣದಿಂದ ನಗರದ ಹಂಪನಕಟ್ಟೆ -ಸುಲ್ತಾನ್ ಬತ್ತೇರಿ ಮಾರ್ಗದಲ್ಲಿ ಓಡುತ್ತಿದ್ದ ರೂಟ್ ನಂಬ್ರ 16 ರ ಬಸ್ ಮೊದಲ ಮಾಲಕನಿಂದ ಮಂಡ್ಯದ ಉದ್ಯಮಿಗೆ ಮಾರಾಟವಾಗಿದೆ.

‘‘ಬಸ್ಸುಗಳಿಗೆ ಪರವಾನಿಗೆ ನೀಡುವಾಗ ಅದರ ಕ್ಷಮತೆ ಹಾಗೂ ಅದು ಸಂಚಾರ ಮಾಡುವ ಪ್ರದೇಶದ ರಸ್ತೆಯ ಗುಣಮಟ್ಟವನ್ನು ಪರಿಗಣಿಸಿ ಪರವಾನಿಗೆ ನೀಡಲಾಗುತ್ತದೆ. ಅದರಂತೆ ಇಲ್ಲಿನ ರಸ್ತೆಯ ಗುಣಮಟ್ಟದ ದೃಷ್ಟಿಯಿಂದ 15 ವರ್ಷ ಮಾತ್ರ ಒಂದು ಬಸ್ಸು ಓಡಿಸಲು ಪರವಾನಿಗೆ ನೀಡಲಾಗುತಿತ್ತು. ಪಾಂಡವಪುರದಲ್ಲಿ ಉರುಳಿದ ಬಸ್ಸು ಮಂಗಳೂರಿನಲ್ಲಿ ನೋಂದಣಿಯಾಗಿ 15 ವರ್ಷಗಳ ಬಳಿಕ ಬೇರೆ ಕಡೆಯ ಮಾಲಕನಿಗೆ ಮಾರಾಟವಾಗಿದೆ. ಬಸ್ಸು ಓಡಿಸುವ ಮೊದಲು ಅದರ ಗುಣಮಟ್ಟದ ಬಗ್ಗೆ ಪ್ರತಿವರ್ಷ ಪ್ರಮಾಣ ಪತ್ರವನ್ನು ಆರ್‌ಟಿಒ ಇಲಾಖೆಯಿಂದ ಪಡೆಯಬೇಕಾಗಿದೆ’’ ಎಂದು ಮಂಗಳೂರು ಆರ್‌ಟಿಒ ಜಾನ್ ಮಿಸ್ಕತ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News