×
Ad

ಭಾಷೆ ಸಂಘರ್ಷಕ್ಕೆ ಎಡೆಮಾಡಿಕೊಡದಿರಲಿ : ಜೋಶಿ

Update: 2018-11-24 22:47 IST

ಮೂಡುಬಿದಿರೆ, ನ. 24:  ಭಾಷಾ ಸಂಘರ್ಷದಿಂದ ಭಾಷೆ ಬೆಳೆಯಲು ಸಾಧ್ಯವಿಲ್ಲ. ಭಾಷೆಯಿರುವುದು ಸಂವೇದನೆಗೆ, ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವುದಕ್ಕೆ ಮತ್ತು ಆತ್ಮಾವಲೋಕನಕ್ಕೆ ಆದರೆ ಭಾಷೆ ಇಂದು ಸಂಘರ್ಷಕ್ಕೆ ಎಡೆಮಾಡಿಕೊಡುವ ಸಂಕೀರ್ಣ ಸ್ಥಿತಿಗೆ ಬಂದು ನಿಂತಿದೆ ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮದರ್ಶಿ ಭೀಮೇಶ್ವರ ಜೋಶಿ ಹೇಳಿದರು.

ಎಕ್ಸಲೆಂಟ್ ಪದವಿಪೂರ್ವ ಕಾಲೇಜು ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯುವ ನಡೆಯುವ ಮೂರನೇ ವರ್ಷದ ಕನ್ನಡ ಹಬ್ಬವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಕನ್ನಡ ಮಾತನಾಡುವುದರಿಂದ ನಮ್ಮ ಘನತೆ ಗೌರವಗಳಿಗೆ ಕಡಿಮೆಯಾಗುತ್ತದೆ ಎಂಬ ಹುಳು ನಮ್ಮ ಮನಸ್ಸಿನೊಳಗೆ ಹೊಕ್ಕಿದೆ. ನಾವು ಭಾಷೆಯ ಸನಿಹಕ್ಕೆ ಹೋಗುವ ಪ್ರಯತ್ನ ಮಾಡಬೇಕು. ಭಾಷೆಯಲ್ಲಿ ಕಲ್ಮಶವಿಲ್ಲ, ತೇಜೋವಧೆಯಿಲ್ಲ, ಅಸಹ್ಯ, ಸಂಕಟ, ಕ್ಷೋಭೆಯಿಲ್ಲ. ಆದರೆ ಭಾಷೆಯನ್ನು ಅನುಭವಿಸಿ ಸಾಕ್ಷಾತ್ಕರಿಸುವ ಮನಸ್ಸುಗಳ ಕೊರತೆಯಿದೆ. ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ಕನ್ನಡ ಭಾಷೆ ಈಗ ಅತೀ ನಿಕೃಷ್ಟಕ್ಕೆ ಒಳಗಾದ ಭಾಷೆಯಾಗಿರುವುದು ದುರಂತ ಎಂದ ಅವರು ಜ್ಞಾನ ಸಂಪಾದನೆ, ಅರಿವು, ವಿಕಾಸಕ್ಕೆ ಪೂರಕವಾಗಬೇಕಾಗಿದ್ದ ಶಿಕ್ಷಣ ಇಂದು ಸಂಪತ್ತು ಗಳಿಕೆಗೆ ಸೀಮಿತ ವಾಗಿದೆ. ಮಕ್ಕಳನ್ನು ಸಂಪತ್ತುಗಳಿಸುವ ವ್ಯಕ್ತಿಗಳನ್ನಾಗಿ ರೂಪಿಸದೆ ಮಕ್ಕಳನ್ನೇ ಸಂಪತ್ತಾಗಿ ರೂಪಿಸಿ ಎಂದು ಪೋಷಕರಿಗೆ ನೀಡಿದರು.

ಆಶೀರ್ವಚನ ನೀಡಿದ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ ಕವಿ, ಸಾಹಿತಿಗಳು ರಾಜ ಮಹಾ ರಾಜರು ಕನ್ನಡ ಭಾಷೆಯ ಬೆಳವಣಿಗೆಗೆ ನೀರೆರೆದು ಪೋಷಿಸಿದ ಪರಿಣಾಮವಾಗಿ ಭಾಷೆ ಶ್ರೀಮಂತವಾಗಿದೆ. ಕನ್ನಡವು ದಕ್ಷಿಣ ಭಾರತದ ಮೂರನೇ ಅತೀ ದೊಡ್ಡ ಭಾಷೆಯಾಗಿದ್ದರೂ ಇನ್ನೂ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿಲ್ಲ. ಅದಕ್ಕಾಗಿ ಸಂಘಟಿತ ಹೋರಾಟ ಮಾಡಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಗಾಯಕ ಶಶಿಧರ ಕೋಟೆ ಮಾತನಾಡಿ ಭಾರತೀಯ ಸಂಸ್ಕøತಿಯು ಭಕ್ತಿ ಮತ್ತು ಪ್ರೀತಿಯ ಸಂಸ್ಕೃತಿ ಯಾಗಿದೆ. ಕನ್ನಡ ಸಂಸ್ಕೃತಿಯೂ ಇದೇ ಆಗಿದೆ. ಯಾವ ಭಾಷೆಯನ್ನೂ ದ್ವೇಷಿಸದೆ ಕನ್ನಡವನ್ನು ಪ್ರೀತಿಸಿ ಬೆಳೆಸೋಣ ಎಂದರು. 

ಹಂಪಿ ಕನ್ನಡ ವಿವಿಯ ಪ್ರಾದ್ಯಾಪಕ ಡಾ. ಸುಬ್ಬಣ್ಣ ರೈ ಎಕ್ಸಲೆಂಟ್ ಪಿಯು ವಿದ್ಯಾರ್ಥಿ ವಿನಯ ಪಾಟೀಲ್ ಬರೆದ `ಅಮೂಲ್ಯ ರತ್ನ' ಬದುಕಿನ ಕಥನ ಹಾಗೂ ಕಾರ್ತಿಕ್ ಬೀಳಗಿ ಬರೆದ 'ದೇವೀ ಮನೆ ರಹಸ್ಯ' ಕೃತಿಗಳನ್ನು ಬಿಡುಗಡೆಗೊಳಸಿದರು. ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಅದ್ಯಾಪಕ ಪ್ರವೀಣ್ ಕಕ್ಕಿಂಜೆ ರಚಿಸಿದ ತೈಲವರ್ಣದ ರತ್ನಾಕರವರ್ಣಿ ಕಲಾಕೃತಿಯನ್ನು ಅನಾವರಣಗೊಳಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ರಾಜಲಕ್ಷ್ಮೀ ಜೋಶಿ, ಎಕ್ಸಲೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಎಕ್ಸಲೆಂಟ್ ಮುಖ್ಯೋಪಾಧ್ಯಾಯ ಗುರುಪ್ರಸಾದ್ ಶೆಟ್ಟಿ, ಕನ್ನಡ ವಿಭಾಗದ ಮುಖ್ಯಸ್ಥ ನವೀನ್ ಮರಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಗುರುಪ್ರಸಾದ್ ಶೆಟ್ಟಿ ವಂದಿಸಿದರು. ಲೋಹಿತ್ ಕಾರ್ಯಕ್ರಮ ನಿರ್ವಹಿಸಿದರು. 

ಶಾಲಾ ವಿದ್ಯಾರ್ಥಿಗಳು ನಾಡಗೀತೆಯನ್ನು ಹಾಡಿದರು. ಕಾರ್ಯಕ್ರಮಕ್ಕೂ ಮುನ್ನ ಅತಿಥಿ ಗಣ್ಯರನ್ನು ಮೆರವಣಿಗೆಯ ಮೂಲಕ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಶಶಿಧರ ಕೋಟೆಯವರು ತಮ್ಮ ಸುಮಧುರ ಕಂಠದಿಂದ  `ಕೋಡಗನ ಕೋಳಿ ನುಂಗಿತ್ತಾ' ಜಾನಪದ ಹಾಡನ್ನು ಹಾಡಿ ರಂಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News