ಕರ್ನಾಟಕದಲ್ಲಿ ಕ್ರೀಡಾ ವಿವಿ ಸ್ಥಾಪನೆಗೆ ಚಿಂತನೆ- ಡಾ. ಜಿ. ಪರಮೇಶ್ವರ್

Update: 2018-11-24 18:24 GMT

ಮೂಡುಬಿದಿರೆ, ನ.24: ಹಿಂದಿನ ಕಾಲದಲ್ಲಿ ಕ್ರೀಡಾ ಸಾಧನೆಗೆ ಬೇಕಾಗುವ ಸವಲತ್ತುಗಳು ಕಡಿಮೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗೆ ಉತ್ತಮ ಸೌಲಭ್ಯಗಳು ಲಭ್ಯವಾಗುತ್ತಿವೆ. ಕ್ರೀಡಾ ಕ್ಷೇತ್ರವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಕ್ರೀಡಾ ಹಬ್ ಸ್ಥಾಪಿಸುವ ಯೋಜನೆ ಇದ್ದು ಕರ್ನಾಟಕದಲ್ಲಿ ಕ್ರೀಡಾ ನಿರಂತರ ಚಟುವಟಿಕೆಯ ಸಮರ್ಪಕತೆಗೆ ಕ್ರೀಡಾ ವಿವಿಯನ್ನು ಸ್ಥಾಪಿಸುವ ಯೋಚನೆ- ಯೋಜನೆಯಿದೆ ಎಂದು ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು.

ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಜಂಟಿ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ 79ನೇ ಅಖಿಲ ಭಾರತ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಾಜಿ ಕ್ರೀಡಾ ಸಚಿವ ಕೆ. ಅಭಯಚಂದ್ರ ರ ಅಧಿಕಾರಾವಧಿಯಲ್ಲಿ ಸ್ಥಾಪಿಸಲ್ಪಟ್ಟ ಸಿಂಥೆಟಿಕ್ ಟ್ರಾಕ್ ನ ಚಟುವಟಿಕೆಯನ್ನು ಮುಂದುವರಿಸುವುದಲ್ಲದೆ ಹೊಸ ಸಿಂಥೆಟಿಕ್ ಟ್ರಾಕ್ ಮತ್ತು ಕ್ರೀಡಾ ಸಲಕರಣೆಗಳ ಪೂರೈಕೆಗೆ ನಾವು ಶ್ರಮ ವಹಿಸುತ್ತೇವೆ ಎಂದರು.

ಕ್ರೀಡಾ ಕ್ಷೇತ್ರದ ಸಾಧಕರಿಗೆ ನಗದು ಪುರಸ್ಕಾರದ ಜೊತೆಗೆ ನಿವೇಶನ ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಗಾಗುವುದು, ಆ ನಿಟ್ಟಿನಲ್ಲಿ ಭಾರತೀಯ ಕ್ರೀಡಾ ಚಟುವಟಿಕೆ ಮತ್ತು ಕ್ರೀಡಾ ಸಾಧಕರನ್ನು ಉತ್ತೇಜಿಸಲಾಗುವುದು ಎಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಪ್ರಭಾರ ಉಪಕುಲಪತಿ ಡಾ. ಈಶ್ವರ ಪಿ ವಹಿಸಿ ಮಾತನಾಡಿ ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ವಿ.ವಿ ಮೂರನೇ ಕ್ರೀಡಾಕೂಟ ಇದಾಗಿದ್ದು ಒಂದು ಮಿನಿ ಭಾರತವು ಇಲ್ಲಿ ನಿರ್ಮಾಣವಾಗಿದೆ, ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ಮೊದಲ ಕ್ರೀಡಾಕೂಟ ಇದಾಗಿದ್ದು ಜಾತಿ, ಧರ್ಮ ಮೊದಲಾದ ಕಟ್ಟುಪಾಡನ್ನು ಮೀರಿ ಕ್ರೀಡಾ ಧರ್ಮವನ್ನು ನಾವು ಬೆಳಗಬೇಕಾಗಿದೆ. ಕ್ರೀಡೆಯು ಆಂತರಿಕ ಒತ್ತಡವನ್ನು ನಿವಾರಿಸುವುದಲ್ಲದೆ ಆತ್ಮಸ್ಥೈರ್ಯವನ್ನು ಬೆಳೆಸುತ್ತದೆ ಎಂದರು.

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಪದ್ಮಶ್ರೀ ಪಿ.ಟಿ ಉಷಾ ಇವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಉಮಾನಾಥ ಎ. ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಪೊಲೀಸ್ ಕಮೀಶನರ್ ಟಿ. ಆರ್ ಸುರೇಶ್, ಉದ್ಯಮಿ ಕಿಶೋರ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕ್ರೀಡಾ ವಿದ್ಯಾರ್ಥಿನಿ ಅಭಿನಯ ಶೆಟ್ಟಿ ಕ್ರೀಡಾಳುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕ್ರೀಡಾ ಜ್ಯೋತಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಸ್ವೀಕರಿಸಿದರು. ಸಾಂಸ್ಕೃತಿಕ ಮೆರವಣಿಗೆ ಮತ್ತು ಕ್ರೀಡಾ ಪಥಸಂಚಲನಕ್ಕೆ ಶಾಸಕ ಉಮಾನಾಥ ಎ. ಕೋಟ್ಯಾನ್ ಚಾಲನೆ ನೀಡಿದರು. ಧರ್ಮಸ್ಥಳದ ಹರ್ಷೇಂದ್ರ ಕುಮಾರ್ ಕ್ರೀಡಾ ಧ್ವಜ ಅರಳಿಸಿದರು. 

ಸಂಘಟನಾ ಕಾರ್ಯದರ್ಶಿ ಕಿಶೋರ್ ಕುಮಾರ್ ಸಿ.ಕೆ ವಂದಿಸಿದರು, ಕ್ರೀಡಾ ಉದ್ಘೋಷಕರಾದ ಸತೀಶ್ ಮತ್ತು ಮುತ್ತು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News