ದ.ಕ. ಜಿಲ್ಲೆಯ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಶೀಘ್ರ ಪರಿಹಾರ: ಸಚಿವ ದೇಶಪಾಂಡೆ

Update: 2018-11-25 05:26 GMT

ಮಂಗಳೂರು, ನ.25: ದ.ಕ. ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಾಗ ಪರುವರ್ತನೆ, 94ಸಿ, ಸಿಂಗಲ್ ಸೈಟ್ ಇತ್ಯಾದಿ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುವುದು ಎಂದು ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಹಲವು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ಇಂದು ಕೂಡ ಸಭೆ ಕರೆಯಲಾಗಿತ್ತು. ಆದರೆ, ಚಿತ್ರನಟ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಲಾಗಿದೆ. ಶೀಘ್ರ ಮತ್ತೊಂದು ಸಭೆ ನಡೆಸಿ ಪರಿಹಾರ ಕ್ರಮ ಜರುಗಿಸಲಾಗುವುದು ಎಂದರು.

ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ಇಂದಿನ ಎಲ್ಲಾ ಸರಕಾರಿ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ. ಹಾಗಾಗಿ ಮೂಡುಬಿದಿರೆ ಮತ್ತು ಕಡಬ ತಾಲೂಕುಗಳ ಅಧಿಕೃತ ಉದ್ಘಾಟನೆಯನ್ನೂ ಮುಂದೂಡಲಾಗಿದೆ. ಬಂಟ್ವಾಳದ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮವನ್ನೂ ಮುಂದೂಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಅಂಬರೀಶ್ ನಿಧನಕ್ಕೆ ಗಣ್ಯರ ಸಂತಾಪ
* ಆತ್ಮೀಯ ಸ್ನೇಹಿತನನ್ನು ನಾನು ಕಳೆದುಕೊಂಡಿದ್ದೇನೆ. ಅವರು ಕರ್ನಾಟಕ ಮಾತ್ರವಲ್ಲ, ದೇಶ-ವಿದೇಶದಲ್ಲೂ ಕೂಡಾ ಖ್ಯಾತರಾಗಿದ್ದರು. ರಾಜ್‌ಕುಮಾರ್ ನಂತರ ಚಲನಚಿತ್ರರಂಗಕ್ಕೆ ಅವರು ಆಧಾರ ಸ್ತಂಭವಾಗಿದ್ದರು. ಅವರ ನಿಧನ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ವಸತಿ ಸಚಿವರಾಗಿ ಅವರು ಹೆಮ್ಮೆ ಪಡುವ ಕೆಲಸ ಮಾಡಿದ್ದರು. ಬಡವರು, ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ ಸ್ನೇಹಜೀವಿಯಾಗಿದ್ದ ಅವರನ್ನು ನಾಡು ಕಳೆದುಕೊಂಡಿದೆ ಎಂದು ಆರ್.ವಿ.ದೇಶಪಾಂಡೆ ತಿಳಿಸಿದರು.

* ಅಂಬರೀಶ್ ಸರಕಾರ, ಕಲಾವಿದರ ಮತ್ತು ಚಿತ್ರರಂಗದ ಕೊಂಡಿಯಾಗಿದ್ದರು. ಇದೀಗ ಆ ಕೊಂಡಿ ಕಳಚಿ ಬಿದ್ದಿದೆ. ಇದರಿಂದ ಚಿತ್ರರಂಗಕ್ಕೆ, ಸರಕಾರಕ್ಕೆ ಅಪಾರ ನಷ್ಟವಾಗಿದೆ. ಅವರ ಅಗಲಿಕೆ ದು:ಖ ತಂದಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.

*ಅಂಬರೀಶ್ ಶ್ರೇಷ್ಠ ಕಲಾವಿದರಾಗಿ, ಉತ್ತಮ ರಾಜಕಾರಣಿಯಾಗಿ ಮೆರೆದಿದ್ದರು. ಚಲನಚಿತ್ರ ರಂಗದ ಭೀಷ್ಮ ಆಗಿದ್ದ ಅವರು ಮಾತು ಚಿತ್ರರಂಗಕ್ಕೆ ಅಂತಿಮ ಆಗಿತ್ತು. ಚಿತ್ರರಂಗಕ್ಕೆ ಒಳ್ಳೆಯ ಹೆಸರು ತಂದಿದ್ದರು. ಸಚಿವರಾಗಿ ಅದ್ಭುತ ಕಾರ್ಯ ಮಾಡಿದ್ದರು. ರಾಜಕಾರಣ, ಚಿತ್ರರಂಗಕ್ಕೆ ತುಂಬಾ ನಷ್ಟವಾಗಿದೆ. ಶ್ರೇಷ್ಠ ಸಾಧಕನನ್ನು ಕಳೆದುಕೊಂಡಿದ್ದೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News