ರಾಜ್ಯದ ಮೀನಿಗೆ ಗೋವಾ ನಿಷೇಧ ಹೇರಿಲ್ಲ: ಸಚಿವ ದೇಶಪಾಂಡೆ
ಮಂಗಳೂರು, ನ. 25: ಗೋವಾ ಸರಕಾರವು ರಾಜ್ಯದ ಮೀನಿಗೆ ನಿಷೇಧ ಹೇರಿಲ್ಲ ಎಂದು ಸ್ಪಷ್ಪಪಡಿಸಿರುವ ಕಂದಾಯ ಸಚಿವ ಆರ್.ವಿ. ದೇಶಪಾಂಡೆ, ಹೊರ ರಾಜ್ಯಗಳಿಗೆ ರವಾನಿಸಲಾಗುವ ಮೀನಿಗೆ ಆಹಾರ ಇಲಾಖೆಯಿಂದ ಕಡ್ಡಾಯವಾಗಿ ‘ಫುಡ್ ಸೇಫ್ಟಿ ಸರ್ಟಿಫಿಕೆಟ್’ ಪಡೆಯಲು ಸಲಹೆ ನೀಡಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು ಮೀನು ನಿಷೇಧವಾಗಿದೆ ಎಂಬ ಮಾಹಿತಿಯ ಹಿನ್ನಲೆಯಲ್ಲಿ ಗೋವಾದ ಆರೋಗ್ಯ ಸಚಿವರೊಂದಿಗೆ ತಾನು ಮಾತುಕತೆ ನಡೆಸಿದ್ದೇನೆ. ಆವಾಗ ಆರೋಗ್ಯ ಸಚಿವರು ನಿಷೇಧ ಮಾಡಿಲ್ಲ. ಮೀನುಗಳಲ್ಲಿ ಅಪಾಯಕಾರಿ ಫಾರ್ಮಾಲಿನ್ ಅಂಶ ಕಂಡುಬಂದಿದ್ದರಿಂದ ಆಹಾರ ಇಲಾಖೆಯ ಪ್ರಮಾಣಪತ್ರ ಒಪ್ಪಿಸುವಂತೆ ಹೇಳಿದ್ದೇವೆ’ ಎಂದು ತಿಳಿಸಿದ್ದಾರೆ. ಹಾಗಾಗಿ ರಾಜ್ಯದ ಮೀನುಗಾರರು ಮೀನು ಕಳುಹಿಸುವ ಮೊದಲು ಸೂಕ್ತ ಪ್ರಮಾಣಪತ್ರ ಪಡೆಯಬೇಕು ಎಂದರು.
ಹೀಗೆ ಪ್ರಮಾಣಪತ್ರ ಪಡೆಯುವುದು ಜನರ ಆರೋಗ್ಯ ಹಿತದೃಷ್ಟಿಯಿಂದಲೂ ಉತ್ತಮವಾಗಿದೆ. ಹೀಗೆ ಮಾಡಿದರೆ ಯಾರಿಗೂ ಹಾನಿಯಾಗದು. ರಾಜ್ಯದ ಮೀನುಗಾರರು ಕೂಡಾ ಫುಡ್ ಸೇಫ್ಟಿ ಸರ್ಟಿಫಿಕೆಟ್ ಪಡೆಯಲು ಒಪ್ಪಿಕೊಂಡಿದ್ದಾರೆ. ಈ ರೀತಿ ಮಾಡಿದರೆ ಸಮಸ್ಯೆ ಬಗೆಹರಿಯಲಿದೆ ಎಂದು ಆರ್.ವಿ. ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು.
ಗ್ರಾಮ ವಿಂಗಡಣೆ ಅಪೂರ್ಭ: ದ.ಕ.ಜಿಲ್ಲೆಯ ಹೊಸ ತಾಲೂಕುಗಳಾದ ಮೂಡುಬಿದಿರೆ ಮತ್ತು ಕಡಬದಲ್ಲಿ ತಹಸೀಲ್ದಾರ್ ಕಚೇರಿಗಳು ಈಗಾಗಲೇ ಕಾರ್ಯಾರಂಭವಾಗಿವೆ. ಸಾಂಕೇತಿಕ ಉದ್ಘಾಟನೆಯಷ್ಟೆ ಬಾಕಿಯಿದೆ. ಅಗತ್ಯ ಕಟ್ಟಡಗಳನ್ನು ಕಟ್ಟಲು ಆಡಳಿತಾತ್ಮಕ ಒಪ್ಪಿಗೆಯೂ ನೀಡಲಾಗಿದೆ. ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. ಹೊಸ ತಾಲೂಕು ರಚನೆಗೆ ಅಗತ್ಯವಾಗಿರುವ ದಾಖಲೆಗಳನ್ನೂ ಅಲ್ಲಿಗೆ ವರ್ಗಾವಣೆ ಮಾಡಲಾಗಿದೆ. ಆದರೆ ಗ್ರಾಮಗಳ ವಿಂಗಡಣೆಯು ಸಂಪೂರ್ಣವಾಗಿ ಆಗಿಲ್ಲ. ಇದೀಗ ಅದಕ್ಕೆ ವೇಗ ನೀಡಲಾಗುತ್ತಿದೆ ಎಂದು ಸಚಿವ ದೇಶಪಾಂಡೆ ತಿಳಿಸಿದರು.
ಕಂದಾಯ ಸಮಸ್ಯೆಗೆ ಪರಿಹಾರ: ಕರಾವಳಿಯಲ್ಲಿ ಭೂ ಪರಿವರ್ತನೆ, ಸಿಂಗಲ್ ಸೈಟ್, 94 ಸಿಗೆ ಸಂಬಂಧಿಸಿದ ಸಮಸ್ಯೆಗಳಿವೆ. 94ಸಿ ಅಡಿಯಲ್ಲಿ ನಗರ ಪ್ರದೇಶದಲ್ಲಿ ಹಕ್ಕುಪತ್ರದೊಂದಿಗೆ ಖಾತಾವನ್ನೂ ಕೊಡಲಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಖಾತಾ ನೀಡಲು ತೊಡಕು ಉಂಟಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್ ಡಿಸೋಜ, ಸಂಸದ ನಳಿನ್ ಕುಮಾರ್, ಮಾಜಿ ಶಾಸಕ ಜೆ.ಆರ್.ಲೋಬೊ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಉಪಸ್ಥಿತರಿದ್ದರು.
ಹೊಸ ತಾಲೂಕು ಉದ್ಘಾಟನೆಗೆ ಮತ್ತೆ ಕಂಟಕ
ಕಡಬ ಮತ್ತು ಮೂಡುಬಿದಿರೆ ತಾಲೂಕುಗಳ ಅಧಿಕೃತ ಉದ್ಘಾಟನೆಗೆ 2ನೇ ಬಾರಿ ಕಂಟಕ ಎದುರಾಗಿದೆ. ಆ.15ರಂದು ಉದ್ಘಾಟನೆಗೆ ದಿನಾಂಕ ನಿಗದಿಗೊಳಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಅದನ್ನು ಮುಂದೂಡಲಾಗಿತ್ತು. ಮಾಜಿ ಸಚಿವ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ನ.25ರ ರವಿವಾರ ನಿಗದಿಪಡಿಸಲಾಗಿದ್ದ ಎರಡೂ ತಾಲೂಕುಗಳ ಅಧಿಕೃತ ಉದ್ಘಾಟನಾ ಕಾರ್ಯಕ್ರಮವು ಮತ್ತೆ ರದ್ದಾಗಿದೆ.
ಈ ಎರಡೂ ತಾಲೂಕುಗಳ ಉದ್ಘಾಟನೆಗೆ ಸಚಿವ ದೇಶಪಾಂಡೆ ಶನಿವಾರ ರಾತ್ರಿಯೇ ದ.ಕ. ಜಿಲ್ಲೆಗೆ ಆಗಮಿಸಿದ್ದರು. ಅಲ್ಲದೆ ರವಿವಾರ ಕಡಬ ಮತ್ತು ಮೂಡುಬಿದಿರೆ ತಾಲೂಕುಗಳ ಉದ್ಘಾಟನೆ ಹಾಗೂ ಬಂಟ್ವಾಳದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ, ಕಂದಾಯ ಇಲಾಖೆಯ ಸಭೆಯನ್ನು ಆಯೋಜಿಸಲಾಗಿತ್ತು. ಜೊತೆಗೆ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅಹವಾಲು ಸಭೆಯನ್ನೂ ಏರ್ಪಡಿಸಲಾಗಿತ್ತು.
ಆದರೆ ಶನಿವಾರ ರಾತ್ರಿ ಮಾಜಿ ಸಚಿವ ಅಂಬರೀಶ್ ನಿಧನರಾದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ರಾಜ್ಯ ಸರಕಾರ ಶೋಕಾಚರಣೆ ಘೋಷಿಸಿದ್ದರಿಂದ ಈ ಎಲ್ಲಾ ಕಾರ್ಯಕ್ರಮವನ್ನು ಮಂದೂಡಲಾಗಿದೆ.
‘ಹೊಸ ತಾಲೂಕು ಉದ್ಘಾಟನೆ ಎರಡು ಬಾರಿ ಅನಿವಾರ್ಯವಾಗಿ ಮುಂದೂಡಿಕೆಯಾಗಿದೆ. ಅತಿ ಶೀಘ್ರದಲ್ಲೇ ಬಂದು ಉದ್ಘಾಟಿಸುತ್ತೇನೆ’ ಎಂದು ದೇಶಪಾಂಡೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ. ಸೋಮವಾರ ಮಂಗಳೂರಿನ ಪುರಭವನದಲ್ಲಿ ಏರ್ಪಡಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮವನ್ನೂ ಕೂಡಾ ಮುಂದೂಡಲಾಗಿದೆ.
ಅಂಬರೀಶ್ ನಿಧನಕ್ಕೆ ಸಂತಾಪ
ಆತ್ಮೀಯ ಸ್ನೇಹಿತನನ್ನು ನಾನು ಕಳೆದುಕೊಂಡಿದ್ದೇನೆ. ಅವರು ಕರ್ನಾಟಕ ಮಾತ್ರವಲ್ಲ, ದೇಶ-ವಿದೇಶದಲ್ಲೂ ಕೂಡಾ ಖ್ಯಾತರಾಗಿದ್ದರು. ರಾಜ್‌ಕುಮಾರ್ ನಂತರ ಚಲನಚಿತ್ರರಂಗಕ್ಕೆ ಅವರು ಆಧಾರ ಸ್ತಂಭವಾಗಿದ್ದರು. ಅವರ ನಿಧನ ಚಿತ್ರರಂಗಕ್ಕೆ ದೊಡ್ಡ ನಷ್ಟವಾಗಿದೆ. ವಸತಿ ಸಚಿವರಾಗಿ ಅವರು ಹೆಮ್ಮೆ ಪಡುವ ಕೆಲಸ ಮಾಡಿದ್ದರು. ಬಡವರು, ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ ಸ್ನೇಹಜೀವಿಯಾಗಿದ್ದ ಅವರನ್ನು ನಾಡು ಕಳೆದುಕೊಂಡಿದೆ ಎಂದು ಆರ್.ವಿ.ದೇಶಪಾಂಡೆ ತಿಳಿಸಿದರು.
ಅಂಬರೀಶ್ ಸರಕಾರ, ಕಲಾವಿದರ ಮತ್ತು ಚಿತ್ರರಂಗದ ಕೊಂಡಿಯಾಗಿದ್ದರು. ಇದೀಗ ಆ ಕೊಂಡಿ ಕಳಚಿ ಬಿದ್ದಿದೆ. ಇದರಿಂದ ಚಿತ್ರರಂಗಕ್ಕೆ, ಸರಕಾರಕ್ಕೆ ಅಪಾರ ನಷ್ಟವಾಗಿದೆ. ಅವರ ಅಗಲಿಕೆ ದುಖ ತಂದಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಅಂಬರೀಶ್ ಶ್ರೇಷ್ಠ ಕಲಾವಿದರಾಗಿ, ಉತ್ತಮ ರಾಜಕಾರಣಿಯಾಗಿ ಮೆರೆದಿದ್ದರು. ಚಲನಚಿತ್ರ ರಂಗದ ಭೀಷ್ಮ ಆಗಿದ್ದ ಅವರು ಮಾತು ಚಿತ್ರರಂಗಕ್ಕೆ ಅಂತಿಮ ಆಗಿತ್ತು. ಚಿತ್ರರಂಗಕ್ಕೆ ಒಳ್ಳೆಯ ಹೆಸರು ತಂದಿದ್ದರು. ಸಚಿವರಾಗಿ ಅದ್ಬುತ ಕಾರ್ಯ ಮಾಡಿದ್ದರು. ರಾಜಕಾರಣ, ಚಿತ್ರರಂಗಕ್ಕೆ ತುಂಬಾ ನಷ್ಟವಾಗಿದೆ. ಶ್ರೇಷ್ಠ ಸಾಧಕನನ್ನು ಕಳೆದುಕೊಂಡಿದ್ದೇವೆ ಎಂದು ಸಂಸದ ನಳಿನ್ ಕುಮಾರ್‌ಕಟೀಲ್ ಸಂತಾಪ ಸೂಚಿಸಿದ್ದಾರೆ.
ಜಾಫರ್ ಶರೀಫ್ ನಿಧನಕ್ಕೆ ಸಂತಾಪ
ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಕೇಂದ್ರ ಸಚಿವ ಸಿ.ಕೆ.ಜಾಫರ್ ಶರೀಫ್ ಅವರ ನಿಧನಕ್ಕೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವರಾಗಿ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ಭಾರತ ದೇಶದ ರೈಲ್ವೆ ಅಭಿವೃದ್ಧಿ ಹಾಗೂ ಸುಧಾರಣೆಗೆ ಅವರು ಅಪಾರ ಕಾಣಿಕೆ ನೀಡಿದ್ದರು. ಶರೀಫ್‌ರ ನಿಧನವು ಪಕ್ಷಕ್ಕೆ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಚಿವ ಖಾದರ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಹಿರಿಯ ರಾಜಕೀಯ ಮುತ್ಸದ್ಧಿ, ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಜಾಫರ್ ಶರೀಫ್ ನಿಧನಕ್ಕೆ ದ.ಕ ಮತ್ತು ಉಡುಪಿ ಜಿಲ್ಲಾ ದಿ ಸೆಂಟ್ರಲ್ ಮುಸ್ಲಿಂ ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್ ತೀವ್ರ ಸಂತಾಪ ಸೂಚಿಸಿದ್ದಾರೆ.