ಸಾಸ್ತಾನ ಟೋಲ್‌ನಿಂದ ರಕ್ಷಣೆ ಕೋರಿ ಪಾದಯಾತ್ರೆ

Update: 2018-11-25 12:32 GMT

ಕೋಟ, ನ. 25: ಉಡುಪಿ ಜಿಲ್ಲೆಯ ವಾಹನಗಳಿಗೆ ಹಾಗೂ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಸಾಸ್ತಾನ ಗುಂಡ್ಮಿ ಟೋಲ್‌ನಲ್ಲಿ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ನೇತೃತ್ವದಲ್ಲಿ ರವಿವಾರ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದಿಂದ ಕೋಟ ಪೊಲೀಸ್ ಠಾಣೆ ಯವರೆಗೆ ನಡೆದ ಬೃಹತ್ ಪಾದಯಾತ್ರೆಯಲ್ಲಿ ನೂರಾರು ಮಂದಿ ಸಾರ್ವ ಜನಿಕರು ಪಾಲ್ಗೊಂಡಿದ್ದು, ಬಳಿಕ ಈ ಕುರಿತ ಮನವಿಯನ್ನು ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್ ಅವರಿಗೆ ಸಲ್ಲಿಸಲಾಯಿತು.

ಉಡುಪಿ ಜಿಲ್ಲಾ ನೊಂದಾಯಿತ ವಾಣಿಜ್ಯ ಮತ್ತು ವಾಣಿಜ್ಯೇತರ ವಾಹನ ಗಳಿಗೆ ಸಾಸ್ತಾನ- ಗುಂಡ್ಮಿ ಸುಂಕ ವಸೂಲಾತಿ ಕೇಂದ್ರದಲ್ಲಿ ಸುಂಕವನ್ನು ಪಡೆಯ ಬಾರದೆಂದು ನವಯುಗ ಕಂಪೆನಿಯವರ ವಿರುದ್ಧ ಈ ಹಿಂದಿನಿಂದಲೂ ಹೋರಾಟ ಮಾಡಲಾಗಿದೆ. ಆದರೆ ನವಯುಗ ಕಂಪೆನಿ ಮತ್ತು ಜಿಲ್ಲಾಡಳಿತವು ನಮ್ಮ ಹೋರಾಟಕ್ಕೆ ಯಾವುದೇ ರೀತಿಯಿಂದ ಸ್ಪಂದಿಸಿರುವುದಿಲ್ಲ. ಇದರ ವಿರುದ್ಧ ಹೋರಾಟ ಮಾಡಿರುವುದರಿಂದ ಇಲ್ಲಿಯವರೆಗೆ ಜಿಲ್ಲಾ ವಾಹನಗಳಿಂಗ ಸುಂಕ ವನ್ನು ವಸೂಲಿ ಮಾಡಿಲಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಇದೀಗ ನವಯುಗ ಕಂಪೆನಿಯು ಸಾಸ್ತಾನ ಗುಂಡ್ಮಿ ಸುಂಕ ವಸೂಲಾತಿಯಲ್ಲಿ ಜಿಲ್ಲಾ ನೊಂದಾಯಿತ ವಾಹನಗಳಿಗೆ ಸುಂಕವನ್ನು ವಸೂಲಿ ಮಾಡುವ ಹುನ್ನಾರ ಮಾಡುತ್ತಿರುವುದನ್ನು ನ್ನು ನಾವು ವಿರೋಧಿಸುತ್ತೇವೆ. ಒಂದು ವೇಳೆ ವಿರೋಧದ ನಡುವೆಯು ಬಲತ್ಕಾರವಾಗಿ ಸುಂಕ ವಸೂಲಾತಿ ಮಾಡಿದರೆ ಅದನ್ನು ಪ್ರತಿ ಭಟಿಸಲಾಗುವುದು. ಆ ಸಂದರ್ಭದಲ್ಲಿ ನವಯುಗ ಕಂಪೆನಿಯವರಿಂದ ಜಿಲ್ಲಾ ನೊಂದಾಯಿತ ವಾಹನ ಮತ್ತು ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ದೌರ್ಜನ್ಯ ಎಸಗದಂತೆ ಸೂಕ್ತ ರಕ್ಷಣೆ ನೀಡಬೇಕೆಂದು ಸಮಿತಿಯು ಮನವಿಯಲ್ಲಿ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ, ಸಮಿತಿಯ ಕಾರ್ಯದರ್ಶಿ ವಿಠಲ ಪೂಜಾರಿ, ಪ್ರಶಾಂತ್ ಶೆಟ್ಟಿ, ಕಾನೂನು ಸಲಹೆಗಾರ ಶ್ಯಾಮ್‌ಸುಂದರ್ ನಾಯರಿ, ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ಶ್ರೀನಿವಾಸ ಪೂಜಾರಿ, ಸಂಜೀವ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News