ರಾಮಮಂದಿರ ನಿರ್ಮಾಣಕ್ಕೆ ಸಂಪೂರ್ಣ ಜಾಗ ನಮಗೆ ಬೇಕು: ವಿಎಚ್‌ಪಿ

Update: 2018-11-25 16:57 GMT

ಅಯೋಧ್ಯೆ, ನ.25: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿಟ್ಟಿನಲ್ಲಿ ವಿವಾದಿತ ಭೂಮಿಯನ್ನು ವಿಭಜಿಸುವ ಯಾವುದೇ ಸೂತ್ರವು ಸ್ವೀಕಾರಾರ್ಹವಲ್ಲ ಎಂದು ವಿಎಚ್‌ಪಿ ಮುಖಂಡ ಚಂಪತ್ ರಾಯ್ ಹೇಳಿದ್ದಾರೆ.

ವಿಎಚ್‌ಪಿ ಸೇರಿದಂತೆ ಹಿಂದು ಸಂಘಟನೆಗಳ ನೇತೃತ್ವದಲ್ಲಿ ನಡೆದ ಧರ್ಮಸಂಸದ್‌ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣದಲ್ಲಿ ಆಗುತ್ತಿರುವ ವಿಳಂಬ ಶುಭಸಂಕೇತವಲ್ಲ . ರಾಮಮಂದಿರ ನಿರ್ಮಾಣಕ್ಕೆ ಸಂಪೂರ್ಣ ಜಾಗ ನಮಗೆ ಬೇಕು ಎಂದರು. ಹಿಂದು ಮುಖಂಡ ರಾಮ್‌ಜಿ ದಾಸ್ ಮಾತನಾಡಿ, 2019ರ ಜನವರಿಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ನಡೆಯುವ ಕುಂಭಮೇಳದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ದಿನಾಂಕವನ್ನು ಘೋಷಿಸಲಾಗುವುದು . ಇನ್ನು ಕೆಲವೇ ದಿನ ಅಷ್ಟೇ. ಸಂಯಮ ವಹಿಸಿ ಎಂದು ಕಾರ್ಯಕರ್ತರನ್ನುದ್ದೇಶಿಸಿ ಹೇಳಿದರು.

ರಾಮ ಜನ್ಮಭೂಮಿ ನ್ಯಾಸ್‌ನ ಅಧ್ಯಕ್ಷ ನೃತ್ಯ ಗೋಪಾಲದಾಸ್ ಮಾತನಾಡಿ, ನಾವು ನ್ಯಾಯಾಲಯಗಳನ್ನು ಗೌರವಿಸುತ್ತೇವೆ. ಪ್ರಧಾನಿ ಮೋದಿ ಹಾಗೂ ಉ.ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಬಗ್ಗೆ ಭಾರೀ ನಿರೀಕ್ಷೆ ಇರಿಸಿಕೊಂಡಿದ್ದೇವೆ. ರಾಮಮಂದಿರ ನಿರ್ಮಾಣಕ್ಕೆ ದಾರಿ ಸುಗಮಗೊಳಿಸುವಂತೆ ಆದಿತ್ಯನಾಥ್‌ರಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದರು.

ಮಹಾಂತ ರವೀಂದ್ರ ಪುರಿ, ದಿಗಂಬರ ಆಖಾಡದ ಮಹಾಂತ್ ಸುರೇಶ್ ದಾಸ್, ಹರಿದ್ವಾರದ ರಾಮಚಂದ್ರಾಚಾರ್ಯ ಹಂಸದೇವಾಚಾರ್ಯ, ಒಡಿಶಾದ ಸ್ವಾಮಿ ಜ್ಞಾನಾನಂದ ಗಿರಿ ಸೇರಿದಂತೆ 100ಕ್ಕೂ ಹೆಚ್ಚು ಸಂತರು ಧರ್ಮ ಸಂಸದ್‌ನಲ್ಲಿ ಪಾಲ್ಗೊಂಡಿದ್ದರು. ಶಿವಸೇನಾ ಮುಖಂಡ ಉದ್ಧವ್ ಠಾಕ್ರೆ ಮಾತನಾಡಿ, ಬಿಜೆಪಿ ರಾಮಮಂದಿರ ನಿರ್ಮಿಸದಿದ್ದರೆ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಎಚ್ಚರಿಸಿದರು. ರಾಮಮಂದಿರ ನಿರ್ಮಾಣದ ನಿಟ್ಟಿನಲ್ಲಿ ನಿಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡಿ. ಮಂದಿರ ನಿರ್ಮಾಣವಾಗಲೇಬೇಕು ಎಂದು ಠಾಕ್ರೆ ಹೇಳಿದರು. ಆದರೆ ಠಾಕ್ರೆ ಹೇಳಿಕೆಯನ್ನು ವಿರೋಧಿಸಿರುವ ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ್‌ಪ್ರಸಾದ್ ಮೌರ್ಯ, ರಾಮಮಂದಿರ ಅಭಿಯಾನದಲ್ಲಿ ಅಥವಾ ಧರ್ಮಸಂಸದ್‌ನಲ್ಲಿ ಶಿವಸೇನೆಗೆ ಯಾವುದೇ ಪಾತ್ರವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಅಯೋಧ್ಯೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿರುವ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನೂ ಬಿಗಿಗೊಳಿಸಲಾಗಿದೆ. ಕ್ಷಿಪ್ರ ಕಾರ್ಯಪಡೆಯ 5 ತುಕಡಿ, ಭಯೋತ್ಪಾದನೆ ನಿಗ್ರಹ ದಳ, ಪ್ರಾದೇಶಿಕ ಸಶಸ್ತ್ರ ಪೊಲೀಸ್ ಪಡೆಯ 42 ತುಕಡಿ ಹಾಗೂ ಸುಮಾರು 1 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೆ ಆಕಾಶದಿಂದ ನಿಗಾ ವಹಿಸುವ ಉದ್ದೇಶದಿಂದ ಡ್ರೋನ್‌ಗಳನ್ನೂ ಬಳಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News