ಸಾಸ್ತಾನ ಟೋಲ್‌ಗೇಟ್ ಎದುರು ಧರಣಿ: ಪ್ರತಿಭಟನಕಾರರ ಬಂಧನ

Update: 2018-11-26 12:55 GMT

ಕೋಟ, ನ.26:ನವಯುಗ ಕಂಪೆನಿಯು ಸಾಸ್ತಾನದ ಗುಂಡ್ಮಿ ಟೋಲ್ ಕೇಂದ್ರದಲ್ಲಿ ಇಂದಿನಿಂದ ಸ್ಥಳೀಯ ವಾಹನಗಳಿಗೆ ಟೋಲ್ ಸಂಗ್ರಹಿಸುತ್ತಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ನೇತೃತ್ವದಲ್ಲಿ ಸೋಮವಾರ ಟೋಲ್‌ ಕೇಂದ್ರದ ಎದುರು ಧರಣಿ ನಡೆಸಲಾಯಿತು.

ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ, ಸಮಿತಿಯ ಕಾರ್ಯದರ್ಶಿ ವಿಠಲ ಪೂಜಾರಿ, ಕಾನೂನು ಸಲಹೆಗಾರ ಶ್ಯಾಮಸುಂದರ್ ನಾಯರಿ ನೇತೃತ್ವದಲ್ಲಿ ಧರಣಿ ನಡೆಸಿದ ನೂರಾರು ಮಂದಿ ಟೋಲ್ ಸಂಗ್ರಹಿಸುತ್ತಿರುವ ನವಯುಗ ಕಂಪೆನಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸುವುದನ್ನು ಕೈಬಿಡುವಂತೆ ಧರಣಿನಿರತರು ಒತ್ತಾಯಿಸಿದರು. ಈ ವೇಳೆ ಆಗಮಿಸಿದ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ಹಾಗೂ ಉಡುಪಿ ಡಿವೈಎಸ್ಪಿ ಜೈಶಂಕರ್ ಪ್ರತಿಭಟನಕಾರರನ್ನು ಸಮಾಧಾನಪಡಿಸಲು ಮುಂದಾದರು. ಇದಕ್ಕೆ ಒಪ್ಪದ ಅವರು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದು ಹೆದ್ದಾರಿಯಲ್ಲಿ ಕುಳಿತು ಧರಣಿ ಮುಂದುವರಿಸಿದರು.

‘ಟೋಲ್ ಸಂಗ್ರಹಕ್ಕೆ ಸಂಬಂಧಿಸಿ ಉಸ್ತುವಾರಿ ಸಚಿವೆ ಜಯಮಾಲಾ ನ.28 ರಂದು ಸಭೆಯನ್ನು ಕರೆದು ನ್ಯಾಯಯುತ ಬೇಡಿಕೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದುದರಿಂದ ಈ ಸಭೆ ನಡೆಯುವವರೆಗೆ ಹಿಂದಿನಂತೆ ಸ್ಥಳೀಯ ವಾಹನಗಳಿಂದ ಟೋಲ್ ತೆಗೆದುಕೊಳ್ಳಬಾರದು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಇಂದಿನಿಂದ ನವಯುಗ ಕಂಪೆನಿ ಯವರಿಗೆ ಪೊಲೀಸ್ ರಕ್ಷಣೆ ಒದಗಿಸಿ ಸುಂಕ ವಸೂಲಾತಿಗೆ ಅವಕಾಶ ಮಾಡಿ ಕೊಟ್ಟಿರುವುದು ಸರಿಯಲ್ಲ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ನಾವು ಜೈಲಿಗೆ ಹೋಗಲು ಕೂಡ ಸಿದ್ಧರಾಗಿದ್ದೇವೆ ಎಂದು ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ ತಿಳಿಸಿದರು.

ಬಳಿಕ ಪೊಲೀಸರು ಹೆದ್ದಾರಿಯಲ್ಲಿ ಕುಳಿತು ಧರಣಿ ನಡೆಸುತ್ತಿದ್ದ ನೂರಾರು ಮಂದಿಯನ್ನು ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆಗೊಳಿಸಿದರು. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ನೇತೃತ್ವದಲ್ಲಿ ಇಬ್ಬರು ಡಿವೈಎಸ್ಪಿ, ಐವರು ವೃತ್ತ ನಿರೀಕ್ಷಕರು, 17 ಎಸ್ಸೈ, 11ಎಎಸ್ಸೈ ಹಾಗೂ 80 ಪೊಲೀಸ್ ಸಿಬ್ಬಂದಿಗಳನ್ನು ಮತ್ತು ಎರಡು ಕೆಎಸ್‌ಆರ್‌ಪಿ, ಎರಡು ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

‘ಸರಕಾರದ ಆದೇಶದಂತೆ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸುವುದನ್ನು ಆರಂಭಿಸಲಾಗಿದೆ. ಈ ಸಂಬಂಧ ಸ್ಥಳೀಯರಿಗೆ 250ರೂ. ಪಾಸ್ ಒದಗಿಸುವುದಾಗಿ ಕಂಪೆನಿ ಹೇಳಿದೆ. ಆದರೆ ಈ ಮಧ್ಯೆ ಟೋಲ್ ಸಂಗ್ರಹಕ್ಕೆ ವಿರೋಧ ವ್ಯಕ್ತಪಡಿಸಿ ಧರಣಿ ನಡೆಸಿದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ಸರಕಾರದ ಆದೇಶದಂತೆ ಟೋಲ್ ಸಂಗ್ರಹ ಮುಂದುವರೆಸಲಾಗಿದೆ. ಸರಕಾರದ ಆದೇಶದಂತೆ ನಾವು ಟೋಲ್ ಕೇಂದ್ರಕ್ಕೆ ಪೊಲೀಸ್ ರಕ್ಷಣೆಯನ್ನು ನೀಡಿದ್ದೇವೆ’
-ಪ್ರದೀಪ್ ಕುರ್ಡೆಕರ್, ತಹಶೀಲ್ದಾರರು, ಉಡುಪಿ ತಾಲೂಕು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News