ಆರೋಗ್ಯ ಸೇವೆ ದೇವರು ಮೆಚ್ಚುವ ಕಾಯಕ: ಬಿಷಪ್ ಜೆರಾಲ್ಡ್ ಲೋಬೊ
ಶಿರ್ವ, ನ.26: ರೋಗಿಗಳ ರೋಗ ಗುಣಪಡಿಸುವ ಮೂಲಕ ಯೇಸು ಸ್ವಾಮಿಯ ನೈಜ ಆಶಯದಂತೆ ಸೇವೆ ಸಲ್ಲಿಸುವ ವೈದ್ಯರು ದಾದಿಯರ ಕಾಯಕ ದೇವರು ಮೆಚ್ಚುವಂತದ್ದು ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.
ಉಡುಪಿ ಧರ್ಮಪ್ರಾಂತ ಹಾಗೂ ಶಿರ್ವ ವಲಯ ಆರೋಗ್ಯ ಆಯೋಗ, ಉಸ್ವಾಸ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಶಿರ್ವ ಸಾವುದ್ ಸಭಾಭವನದಲ್ಲಿ ಆಯೋಜಿಸಲಾದ ವಲಯ ಮಟ್ಟದ ಕೆಥೊಲಿಕ್ ವೈದ್ಯರು, ದಾದಿಯರು ಮತ್ತು ಪ್ಯಾರಾಮೆಡಿಕಲ್ ಸಿಬಂದಿಗಳ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅಂದು ಯೇಸು ಸ್ವಾಮಿ ಮಾಡಿದ ಸೇವೆಯನ್ನು ಅವರ ಪ್ರತಿರೂಪವಾಗಿ ವೈದ್ಯರು, ದಾದಿಯರು, ಪ್ಯಾರಾಮೆಡಿಕಲ್ ಸಿಬಂದಿಗಳು ಇಂದು ನಿರ್ವಹಿಸುತ್ತಿದ್ದಾರೆ. ಕಾಯಿಲೆಯಲ್ಲಿ ನರಳುತ್ತಿರುವವರ ನೋವು ನಿವಾರಿಸುವ ಮಹತ್ತರ ವಾದ ಜವಾಬ್ದಾರಿಯನ್ನು ವಹಿಸಿಕೊಳ್ಳುವುದರ ಮೂಲಕ ಆರೋಗ್ಯಯುತ ಸಮಾಜ ನಿರ್ಮಿಸುವತ್ತ ಪಣತೊಟ್ಟಿದ್ದಾರೆ ಎಂದರು.
ಉಡುಪಿ ಧರ್ಮಪ್ರಾಂತ ಆರೋಗ್ಯ ಆಯೋಗದ ನಿರ್ದೇಶಕ ಡಾ.ಎಡ್ವರ್ಡ್ ಲೋಬೊ ಮಾತನಾಡಿ, ಆರೋಗ್ಯ ಆಯೋಗದ ಮೂಲಕ ಕಳೆದ 6 ವರ್ಷ ಗಳಲ್ಲಿ ಧರ್ಮಪ್ರಾಂತದ ಕ್ರೈಸ್ತರ ಆರೋಗ್ಯ ರಕ್ಷಣೆಯಲ್ಲಿ ಹಲವಾರು ಯೋಜನೆ ಗಳನ್ನು ಹಮ್ಮಿಕೊಂಡಿದ್ದು, ಆರೋಗ್ಯ ಸಂಬಂಧಿತ ನಿರಂತರವಾದ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. 2025ರೊಳಗೆ ಸಂಪೂರ್ಣ ಆರೋಗ್ಯ ಭರಿತ ಧರ್ಮಪ್ರಾಂತ ನಿರ್ಮಿಸುವ ಯೋಜನೆ ಹೊಂದಲಾಗಿದೆ ಎಂದು ತಿಳಿಸಿದರು.
ಮಂಗಳೂರ ಸಂತ ಜೋಸೆಫರ ಸೆಮಿನರಿಯ ಪ್ರಾಧ್ಯಾಪಕ ವಂ.ಡಾ. ಪ್ರವೀಣ್ ಲಿಯೊ ಲಸ್ರಾದೊ, ವಂ.ರೊಕ್ವಿನ್ ಪಿಂಟೊ, ಮಣಿಪಾಲ ಕೆಎಂಸಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಲೆಸ್ಲಿ ಲೂವಿಸ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ಮೊನ್ಸಿಂಜ್ಞೋರ್ ಬ್ಯಾಪ್ಟಿಸ್ಟ್ ಮಿನೇಜಸ್, ಶಿರ್ವ ಡೊನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶು ಪಾಲ ವಂ.ಮಹೇಶ್ ಡಿಸೋಜ, ಶಿರ್ವ ಚರ್ಚಿನ ಸಹಾಯಕ ಧರ್ಮಗುರು ವಂ.ಅಶ್ವಿನ್ ಆರಾನ್ಹಾ, ಪಾಲನ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜ, ಪಿಲಾರ್ ಚರ್ಚಿನ ಧರ್ಮಗುರು ವಂ.ವಿಶಾಲ್ ಲೋಬೊ ಉಪಸ್ಥಿತರಿದ್ದರು.
ಶಿರ್ವ ವಲಯದ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ ಸ್ವಾಗತಿಸಿದರು. ಆಯೋಗದ ಕಾರ್ಯದರ್ಶಿ ಗ್ರೆಟ್ಟಾ ಮಿನೇಜಸ್ ವಂದಿಸಿದರು.