ಭೀಮಾ ಕೋರೆಗಾಂವ್: ವರವರ ರಾವ್ ಬಂಧನ ವಿರೋಧಿಸಿ ಪ್ರತಿಭಟನೆ

Update: 2018-11-26 15:22 GMT

ಹೈದರಾಬಾದ್, ನ. 26: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಹೋರಾಟಗಾರ ವರವರ ರಾವ್ ಅವರನ್ನು ಬಂಧಿಸಿರುವುದರ ವಿರುದ್ಧ ತೆಲಂಗಾಣ ಡೆಮಾಕ್ರೆಟಿಕ್ ಫಾರಂ ರವಿವಾರ ನಗರದ ಧರ್ನಾ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿತು.

ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್‌ನ ಗಾಂಧಿನಗರದ ಫ್ಲಾಟ್‌ನಲ್ಲಿ ಗೃಹ ಬಂಧನದಲ್ಲಿ ಇದ್ದ ವರವರ ರಾವ್ ಅವರನ್ನು ಪುಣೆ ಪೊಲೀಸರು ನವೆಂಬರ್ 17ರಂದು ಬಂಧಿಸಿದ್ದರು.

ವರವರ ರಾವ್ ಬಂಧನದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಮಹಿಳಾ ಹೋರಾಟಗಾರ್ತಿ ಸಂಧ್ಯಾ, ಈ ಹೋರಾಟ ಮಾನವ ಹಕ್ಕು ಉಲ್ಲಂಘನೆ ವಿರುದ್ಧ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಹಲವು ಬುದ್ಧಿಜೀವಿಗಳು, ಲೇಖಕರು, ವಕೀಲರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಕಾನೂನು ಬಾಹಿರ ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ದಾಖಲಿಸಲು ನಾವು ಬಯಸಿದ್ದೇವೆ. ಪ್ರತಿಭಟನೆ ದೇಶಾದ್ಯಂತ ನಡೆಯಲಿದೆ. ಆದರೆ, ಈಗಲೂ ಮೋದಿ ಸರಕಾರಕ್ಕೆ ಪ್ರಜಾಪ್ರಭುತ್ವದ ಧ್ವನಿ ಕೇಳಲು ಬಯಸುತ್ತಿಲ್ಲ. ಮೋದಿ ಸರಕಾರ ಮಾನವ ಹಕ್ಕುಗಳ ಬಗ್ಗೆ ಅಸಹನೆ ಹೊಂದಿದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಫ್ಯಾಸಿಸ್ಟ್ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಂದು ಆರೋಪಿಸಿದರು.

 ಪ್ರಧಾನಿ ಮೋದಿ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಪ್ರಜಾಪ್ರಭುತ್ವ ವಿರೋಧಿ ಹಾಗೂ ಫ್ಯಾಸಿಸ್ಟ್‌ಗಳು. ಇವರ ಅಮಾನವೀಯ ಆಡಳಿತದ ಬಗ್ಗೆ ಜನರಿಗೆ ಸಂದೇಶ ರವಾನಿಸಲು ನಾವು ಬಯಸುತ್ತೇವೆ. ಅವರ ವಿರುದ್ಧ ಹೋರಾಡಲು ಜನರು ಮುಂದೆ ಬರಬೇಕು ಎಂದರು.

ಅವರ ವಿರುದ್ಧ ಧ್ವನಿ ಎತ್ತುವವರನ್ನು ನಗರ ನಕ್ಸಲರೆಂಬ ಹೆಸರಿನಲ್ಲಿ ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ. ದೀರ್ಘಾವಧಿ ಪ್ರಕ್ರಿಯೆಯಲ್ಲಿ ಅವರು ನಕಲಿ ಆರೋಪ ಕೂಡ ಮಾಡುವ ಸಾಧ್ಯತೆ ಇದೆ ಎಂದು ಸಂಧ್ಯಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News