ಸಾಮಾಜಿಕ ಜಾಲತಾಣದಲ್ಲಿ ‘ವಿಮಾನದಲ್ಲಿ ಉಗ್ರರು’ ಸಂದೇಶ ರವಾನೆ: ಜೆಟ್ ಏರ್‌ವೇಸ್ ಪ್ರಯಾಣಿಕ ವಶಕ್ಕೆ

Update: 2018-11-26 15:45 GMT

 ಹೊಸದಿಲ್ಲಿ, ನ. 26: ಮುಂಬೈಗೆ ತೆರಳುತ್ತಿದ್ದ ಜೆಟ್ ಏರ್‌ವೇಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 21 ವರ್ಷದ ಯುವಕ ವಿಮಾನದ ಒಳಗೆ ಉಗ್ರರಿದ್ದಾರೆ ಎಂದು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಆತನನ್ನು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಕೆಳಗೆ ಇಳಿಸಲಾಯಿತು ಹಾಗೂ ವಶಕ್ಕೆ ತೆಗೆದುಕೊಳ್ಳಲಾಯಿತು.

 ಮುಂಬೈ ಭಯೋತ್ಪಾದಕ ದಾಳಿಯ 10ನೇ ವರ್ಷಾಚರಣೆಯ ದಿನವಾದ ಸೋಮವಾರ ‘ವಿಮಾನದಲ್ಲಿ ಉಗ್ರರಿದ್ದಾರೆ’ ಎಂದು ಸಾಮಾಜಿಕ ಮಾಧ್ಯಮದ ಆ್ಯಪ್‌ನಲ್ಲಿ ಪ್ರಯಾಣಿಕ ಯೋಗೇನ್ ಪೊಡ್ಡಾರ್ ಬರೆದಿರುವ ಬಗ್ಗೆ ಸಹ ಪ್ರಯಾಣಿಕರು ಕ್ಯಾಪ್ಟನ್‌ಗೆ ಮಾಹಿತಿ ನೀಡಿದ್ದರು.

 ವಿಮಾನದಲ್ಲಿದ್ದ ಯೋಗೇನ್ ಸ್ನಾಪ್‌ಚಾಟ್‌ನಲ್ಲಿ ತನ್ನ ಗೆಳೆಯನೊಂದಿಗೆ ಚಾಟ್ ಮಾಡುತ್ತಿದ್ದ. ಆತ ‘ವಿಮಾನದಲ್ಲಿ ಉಗ್ರರಿದ್ದಾರೆ, ನಾನು ಮಹಿಳೆಯರ ಹೃದಯವನ್ನು ಛಿದ್ರಗೊಳಿಸಿದೆ’ ಎಂದು ಬರೆಯುತ್ತಿರುವುದನ್ನು ಆತನ ಹಿಂದೆ ಕುಳಿತ ಸಹ ಪ್ರಯಾಣಿಕ ಬೆಂಜಮಿನ್ ಪ್ಲಾಕೆಟ್ ಎಂಬವರು ನೋಡಿದರು ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮೂಲಗಳು ತಿಳಿಸಿವೆ.

ಅವರು ಕೂಡಲೇ ವಿಮಾನದ ಕ್ಯಾಪ್ಟನ್‌ಗೆ ಮಾಹಿತಿ ನೀಡಿದರು. ಕ್ಯಾಪ್ಟನ್ ಸಂದೇಶವನ್ನು ಜೆಟ್ ಏರ್‌ವೇಸ್‌ನ ಡ್ಯೂಟಿ ಮ್ಯಾನೇಜರ್‌ಗೆ ರವಾನಿಸಿದರು. ಈ ಹಿನ್ನೆಲೆಯಲ್ಲಿ ಜೆಟ್ ಏರ್‌ವೇಸ್‌ನ ಭದ್ರತಾ ಸಿಬ್ಬಂದಿ ಯೋಗೇನ್ ಅವರನ್ನು ವಶಕ್ಕೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ. ಬೆಳಗ್ಗೆ 8.20ಕ್ಕೆ ಘಟನೆ ನಡೆದ ಬಳಿಕ ಪೈಲೆಟ್ ವಿಮಾನವನ್ನು ಕೆಳಗಿಳಿಸಿದರು ಹಾಗೂ ಯೋಗೇನ್ ಅವರನ್ನು ವಿಚಾರಣೆಗೆ ನೇತಾಜಿ ಸುಭಾಶ್‌ಚಂದ್ರ ಭೋಸ್ ಏರ್‌ಪೋರ್ಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News