×
Ad

ಅಯೋಧ್ಯೆ ಕುರಿತು ಪ್ರಧಾನಿ ಟೀಕೆಗಳು ಸುಪ್ರೀಂ ಕೋರ್ಟ್‌ಗೆ ಮಾನಹಾನಿಕರ: ಕಪಿಲ್ ಸಿಬಲ್

Update: 2018-11-26 21:18 IST

 ಹೊಸದಿಲ್ಲಿ,ನ.26: ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ಕುರಿತು ಮಾಡಿರುವ ಟೀಕೆಗಳು ಲಜ್ಜೆಗೇಡಿತನದ್ದಾಗಿದ್ದು, ಸರ್ವೋಚ್ಚ ನ್ಯಾಯಾಲಯದ ಪಾಲಿಗೆ ಮಾನಹಾನಿಕರವಾಗಿವೆ ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಸೋಮವಾರ ಹೇಳಿದರು.

ಸಿಬಲ್ ಅವರು ಕಳೆದ ವರ್ಷ ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು 2019ರ ಸಾರ್ವತ್ರಿಕ ಚುನಾವಣೆಗಳು ಪೂರ್ಣಗೊಳ್ಳುವವರೆಗೆ ಮುಂದೂಡಬೇಕೆಂದು ಕೋರಿ ಸರ್ವೋಚ್ಚ ನ್ಯಾಯಾಲಯಲ್ಲಿ ಅರ್ಜಿ ಸಲ್ಲಿಸಿದ್ದ ಮುಹಮ್ಮದ್ ಹಾಷಿಂ ಪರ ವಕೀಲರಾಗಿದ್ದರು.

 ರವಿವಾರ ರಾಜಸ್ಥಾನದ ಆಲ್ವಾರ್‌ನಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ಮೋದಿ ಅವರು,ಕಾಂಗ್ರೆಸ್ ಪಕ್ಷವು ನ್ಯಾಯಾಂಗಕ್ಕೆ ಭೀತಿಯ ವಾತಾವರಣವನ್ನು ಸೃಷ್ಟಿಸುತ್ತದೆ. 2019ರ ಚುನಾವಣೆಗಳ ಹಿನ್ನೆಲೆಯಲ್ಲಿ ಅಯೋಧ್ಯೆ ವಿಚಾರಣೆಯನ್ನು ವಿಳಂಬಗೊಳಿಸುವಂತೆ ಅದು ಸರ್ವೋಚ್ಚ ನ್ಯಾಯಾಲಯಕ್ಕೆ ಹೇಳುತ್ತದೆ. ಅದು ಭಾರತದ ಮುಖ್ಯ ನ್ಯಾಯಾಧೀಶರನ್ನು ಮಹಾಭಿಯೋಗಕ್ಕೊಳಪಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತದೆ ಎಂದು ಹೇಳಿದ್ದರು. ನಂತರ ತನ್ನ ಹೇಳಿಕೆಗೆ ಪೂರಕವಾಗಿ ಟ್ವೀಟಿಸಿದ್ದ ಅವರು,ವಕೀಲರನ್ನು ರಾಜ್ಯಸಭೆಗೆ ಸದಸ್ಯರನ್ನಾಗಿ ಕಳುಹಿಸಿ ಪ್ರಮುಖ ಮಸೂದೆಗಳಿಗೆ ಅವರು ತಡೆಯೊಡ್ಡುವಂತೆ ಮಾಡುವುದು ಮತ್ತು ನ್ಯಾಯಾಲಯದ ತೀರ್ಪು ತಮ್ಮ ಪರವಾಗಿ ಬರುವಂತೆ ಒತ್ತಡ ಹೇರುವುದು. ನ್ಯಾಯಾಧೀಶರು ಅವರು ಬಯಸಿದ ತೀರ್ಪು ನೀಡದಿದ್ದರೆ ಅವರಿಗೆ ಮಹಾಭಿಯೋಗದ ಬೆದರಿಕೆಯೊಡ್ಡುವುದು...ಇದು ಕಾಂಗ್ರೆಸ್‌ನ ಹೊಸ ತಂತ್ರವಾಗಿದೆ ಎಂದು ಹೇಳಿದ್ದರು.

ಪ್ರಧಾನಿಯವರು ಸರ್ವೋಚ್ಚ ನ್ಯಾಯಾಲಯದ ಮಾನಹಾನಿಯನ್ನುಂಟು ಮಾಡುತ್ತಿದ್ದಾರೆ. ಸರ್ವೋಚ್ಚ ನ್ಯಾಯಾಲಯವು ರಾಜಕೀಯ ಒತ್ತಡಗಳಿಗೆ ಮಣಿಯುತ್ತದೆ ಎಂದು ಹೇಳಲು ಅವರು ಪ್ರಯತ್ನಿಸುತ್ತಿದ್ದಾರೆಯೇ?, ಇದು ನಾಚಿಕೆಗೇಡಿನದಾಗಿದೆ. ಪ್ರಧಾನಿಯವರು ಇಂತಹ ಹೇಳಿಕೆಗಳನ್ನು ನೀಡಬಾರದು ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಬಲ್ ಹೇಳಿದರು.

ಯಾರು ಭೀತಿಯ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ?, ವಿಹಿಂಪ ಅಯೋಧ್ಯೆಯಲ್ಲಿ ಏನು ಮಾಡುತ್ತಿದೆ?, ಅವರು ಮೋದಿಯವರಿಗೆ ರಾಜಕೀಯ ಲಾಭಗಳನ್ನು ಒದಗಿಸುತ್ತಿರುವ ಭೀತಿಯ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ ಎಂದ ಸಿಬಲ್,ಪ್ರಧಾನಿಯವರಿಗೆ ವಾಸ್ತವಾಂಶಗಳು ಗೊತ್ತಿಲ್ಲ. ಕಾಂಗ್ರೆಸ್ ದಾವೆಯ ಭಾಗವಾಗಿಲ್ಲ ಮತ್ತು 2018,ಜನವರಿಯಿಂದ ಅಯೋಧ್ಯೆ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹಾಜರಾಗುವುದನ್ನು ತಾನು ನಿಲ್ಲಿಸಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News