ಟೋಲ್ ಕಂಪೆನಿ ವಿರುದ್ಧ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ

Update: 2018-11-26 15:50 GMT

ಉಡುಪಿ, ನ.26: ಸಾಸ್ತಾನ ಮತ್ತು ಹೆಜಮಾಡಿಯಲ್ಲಿ ಟೋಲ್ ಕಂಪೆನಿ ನಡೆಸುತ್ತಿರುವ ದಬ್ಬಾಳಿಕೆ ವಿರುದ್ಧ ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೋಲ್ ಅಂಚಿನಲ್ಲಿ ಬರುವ ಪೇಟೆಯೇ ಇಬ್ಬಾಗವಾಗಿ ಒಂದೇ ಗ್ರಾಮದ ಜನರು ತಿರುಗಾಡಲು ಕಡ್ಡಾಯ ಟೋಲ್ ಕೊಡಬೇಕಾದ ಸ್ಥಿತಿಗೆ ಗುತ್ತಿಗೆದಾರ ಕಂಪೆನಿ ತಂದು ಬಿಟ್ಟಿದೆ ಎಂದವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮೇಲುಸ್ತುವಾರಿ ನಡೆಸುವ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕೃಷ್ಣ ರೆಡ್ಡಿ ಅವರು ಕನಿಷ್ಠ 10 ಕಿ.ಮೀ. ವ್ಯಾಪ್ತಿ ಪ್ರದೇಶದ ವಾಹನ ಮಾಲಕರಿಗೆ ರಿಯಾಯಿತಿ ಕೊಡುವ ಭರವಸೆ ನೀಡಿದ್ದರೂ ಜಿಲ್ಲೆಯಲ್ಲಿ ಟೋಲ್‌ಗೇಟ್ ಮೇಲೆ ಸರಕಾರಕ್ಕೆ ನಿಯಂತ್ರಣವಿಲ್ಲದಾಗಿದೆ ಎಂದವರು ಹೇಳಿದ್ದಾರೆ.

ಟೋಲ್ ವಿರುದ್ದ ನ್ಯಾಯಕ್ಕಾಗಿ ಹೋರಾಟ ನಡೆಸುವ ಪ್ರತಿಭಟನಾಕಾರರು ಸೊಲ್ಲೆತ್ತುವ ಮೊದಲೇ ಬಂಧಿಸಲಾಗುತ್ತದೆ. ಗುತ್ತಿಗೆದಾರರ ಮೇಲೆ ನಿಯಂತ್ರಣವಿಲ್ಲವೆಂದು ಜಿಲ್ಲಾಡಳಿತ ಕೈ ಚೆಲ್ಲಿದರೆ, ಪೊಲೀಸ್ ಪಹರೆಯ ಅಗತ್ಯವೇನು ಎಂದು ಕೋಟ ಶ್ರೀನಿವಾಸ ಪೂಜಾರಿ ಆಕ್ಷೇಪಿಸಿದ್ದಾರೆ.

ತಕ್ಷಣ ಕನಿಷ್ಠ ಸ್ಥಳೀಯ 20 ಕಿ.ಮಿ. ವ್ಯಾಪ್ತಿಯಲ್ಲಿಯಾದರೂ ವಾಹನ ಮಾಲಿಕರಿಗೆ ರಿಯಾಯಿತಿ ಕೊಡದಿದ್ದರೆ ಪ್ರತಿಭಟನಾಕಾರರಿಗೆ ಜನಪ್ರತಿನಿಧಿಗಳು ಬೆಂಬಲ ನೀಡುವುದಾಗಿ ಕೋಟ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News