‘ದಿ ವೈರ್’ ವಿರುದ್ಧ 6000 ಕೊ. ರೂ. ಮೊಕದ್ದಮೆ ದಾಖಲಿಸಿದ ರಿಲಾಯನ್ಸ್

Update: 2018-11-26 17:08 GMT

ಹೊಸದಿಲ್ಲಿ, ನ. 26: ವಿವಾದಾತ್ಮಕ ರಫೇಲ್ ಒಪ್ಪಂದದ ಬಗ್ಗೆ ಆನ್‌ಲೈನ್ ವೀಡಿಯೊ ಪ್ರಸಾರ ಮಾಡಿದ ಕುರಿತಂತೆ ಅನಿಲ್ ಅಂಬಾನಿ ಅವರ ರಿಲಾಯನ್ಸ್ ಇನ್‌ಫ್ರಾಸ್ಟ್ರಕ್ಚರ್ ‘ದಿ ವೈರ್’ ವಿರುದ್ಧ ಅಹ್ಮದಾಬಾದ್ ನಗರ ಸಿವಿಲ್ ನ್ಯಾಯಾಲಯದಲ್ಲಿ 6,000 ಕೋ. ರೂ. ಮೊಕದ್ದಮೆ ದಾಖಲಿಸಿದೆ.

‘ರಫೇಲ್ ಒಪ್ಪಂದ: ವಿವಾದ ಅರ್ಥೈಸುವಿಕೆ’ ಶೀರ್ಷಿಕೆಯ ವೀಡಿಯೊ ಚರ್ಚೆಯನ್ನು 2018 ಆಗಸ್ಟ್ 23ರಂದು ‘ದಿ ವೈರ್’ ಪ್ರಸಾರ ಮಾಡಿತ್ತು. ಈ ಚರ್ಚೆಯಲ್ಲಿ ಹಿರಿಯ ರಕ್ಷಣಾ ಪತ್ರಕರ್ತ ಅಜಯ್ ಶುಕ್ಲಾ ಹಾಗೂ ‘ದಿ ವೈರ್’ನ ಎಂ.ಕೆ. ವೇಣು ಸಹಿತ ಹಲವರು ಪಾಲ್ಗೊಂಡಿದ್ದರು. ರಾಷ್ಟ್ರೀಯ ಭದ್ರತಾ ವಿಶ್ಲೇಷಕ ಹ್ಯಾಪಿಮನ್ ಜಾಕೂಬ್ ಕಾರ್ಯಕ್ರಮದ ನಿರೂಪಣೆ ಮಾಡಿದ್ದರು.

‘ದಿ ವೈರ್’ನ ಸ್ಥಾಪಕ ಸಂಪಾದಕ ಹಾಗೂ ಶುಕ್ಲಾ, ಸಂಸ್ಥೆಯ ಸಂಪಾದಕೀಯ ಅಥವಾ ವ್ಯವಹಾರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಲ್ಲಿ ಪಾತ್ರ ವಹಿಸದ ‘ದಿ ವೈರ್’ನ ಆಫೀಸ್ ಮ್ಯಾನೇಜರ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

ಮೋದಿ ಸರಕಾರ 36 ರಫೇಲ್ ಜೆಟ್‌ಗಳನ್ನು ಖರೀದಿಸಿದ ಪ್ರಕ್ರಿಯೆ ಪಾರದರ್ಶಕವಾಗಿತ್ತೇ ಎಂಬ ಬಗ್ಗೆ ವೈಚಾರಿಕ ಹಾಗೂ ಮಾಹಿತಿಯುಕ್ತ ಚರ್ಚೆಯನ್ನು ಈ ಪ್ರದರ್ಶನದಲ್ಲಿ ಮಾಡಲಾಗಿತ್ತು.

ಅಂತಿಮ ಕ್ಷಣದಲ್ಲಿ ಈ ಒಪ್ಪಂದ ಹೇಗೆ ಬದಲಾಯಿತು ಹಾಗೂ ವಿದೇಶಿ ಪಾಲುದಾರರನ್ನು ಆಯ್ಕೆ ಮಾಡುವಾಗ ಡಸ್ಸಾಲ್ಟ್ ರಿಲಾಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಇತಿಹಾಸವನ್ನು ಪರಿಗಣನೆಗೆ ತೆಗೆದುಕೊಂಡಿತೇ ಎಂಬ ವಿಚಾರವನ್ನು ಈ ಚರ್ಚೆ ಸಹಜವಾಗಿ ಒಳಗೊಂಡಿತ್ತು.

ಈ ಕಾರ್ಯಕ್ರಮ ದೋಷಪೂರಿತ ಹಾಗೂ ಚರ್ಚೆಯ ವೇಳೆ ನೀಡಲಾದ ಹೇಳಿಕೆ ಸಂಪೂರ್ಣ ತಪ್ಪು ಹಾಗೂ ದಾರಿ ತಪ್ಪಿಸುವಂತದ್ದು. ಇದು ಕಂಪೆನಿ ಹಾಗೂ ಅದರ ಅಧ್ಯಕ್ಷರ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ಪೂರ್ವ ನಿರ್ಧರಿತವಾಗಿತ್ತು ಎಂದು ರಿಲಾಯನ್ಸ್ ಸಮೂಹ ಹಾಗೂ ಅನಿಲ್ ಅಂಭಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News