ಪತಂಜಲಿ ಹೆಸರಿನಲ್ಲಿ ಮಹಿಳೆಗೆ 7.75ಲಕ್ಷ ರೂ. ವಂಚನೆ: ದೂರು

Update: 2018-11-26 18:22 GMT

ಉಡುಪಿ, ನ.26: ಆನ್‌ಲೈನ್ ಮೂಲಕ ಪತಂಜಲಿ ಆಯುರ್ವೇದ ವ್ಯವಹಾರದ ಹೆಸರಿನಲ್ಲಿ ಮಹಿಳೆಯೊಬ್ಬರಿಂದ ಲಕ್ಷಾಂತರ ರೂ. ಹಣವನ್ನು ಖಾತೆಗೆ ಜಮಾ ಮಾಡಿಸಿ ವಂಚನೆ ಎಸಗಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ ಕೋಟೇಶ್ವರದ ವಾಸುದೇವ ಹೊಳ್ಳ ಎಂಬವರ ಪತ್ನಿ ಅನುರಾಧ ಹೊಳ್ಳ(39) ವಂಚನೆಗೆ ಒಳಗಾದ ಮಹಿಳೆ. ಇವರು ಪತಂಜಲಿ ಚಿಕಿತ್ಸಾಲಯದ ಉದ್ದೇಶಕ್ಕಾಗಿ ವ್ಯವಹಾರ ಮಾಡುವ ನಿಟ್ಟಿನಲ್ಲಿ 2018ರ ಆ.9ರಂದು ಆನ್‌ಲೈನ್ ಮೂಲಕ ಪತಂಜಲಿ ಚಿಕಿತ್ಸಾಲಯಕ್ಕೆ ದಾಖಲಾತಿ ನೊಂದಣಿ ಮಾಡಿದ್ದರು. ಆ ನಂತರ ದೂರವಾಣಿ ಕರೆ ಮಾಡಿದ ವ್ಯಕ್ತಿಗಳ ಸೂಚನೆಯಂತೆ ಅನುರಾಧ ಹೊಳ್ಳ ವಿವಿಧ ದಾಖಲೆಗಳು, ಆ.23ರಂದು ವ್ಯವಹಾರದ ನೊಂದಣಿಗಾಗಿ 50,000ರೂ., ಸೆ.1ರಂದು ಸೆಕ್ಯೂರಿಟಿ ಡಿಪಾಸೆಟ್ಗಾಗಿ 2,30,000ರೂ., ಸೆ.12ರಂದು ಆರ್ಯುವೇದ ಸಾಮಾನು ಖರೀದಿಗಾಗಿ 2,50,000ರೂ., ಅ.15ರಂದು ಯೋಗ ತರಬೇತಿ ಸೆಕ್ಯೂರಿಟಿ ಡಿಪಾಸಿಟ್ಗಾಗಿ 1,10,000ರೂ., ಅ.26ರಂದು ವ್ಯಾಟ್ ತೆರಿಗೆ ಮೊತ್ತ 80,000ರೂ., ಅ.30ರಂದು ತೆರಿಗೆ ದಂಡಕ್ಕಾಗಿ 55,000ರೂ. ಹಣವನ್ನು ಪತಂಜಲಿ ಆರ್ಯುವೇದ ಲಿಮಿಟೆಡ್ ಪಂಜಾಬ್ ನ್ಯಾಶನಲ್ ಬ್ಯಾಂಕ್, ಹರಿದ್ವಾರ ಉತ್ತರಖಂಡ ಮತ್ತು ಐಸಿಐಸಿಐ ಬ್ಯಾಂಕ್ ಗೌತಮ ಬುದ್ಧ ನಗರ ಶಾಖೆಯ ಖಾತೆಗೆ ಕಾರ್ಪೊರೇಶನ್ ಬ್ಯಾಂಕ್ ವಡೋರಹೋಬಳಿ ಮತ್ತು ಕರ್ನಾಟಕ ಬ್ಯಾಂಕ್ ಕುಂಭಾಶಿ ಶಾಖೆಯಿಂದ ಜಮಾ ಮಾಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ತದನಂತರ ಮಾಹಿತಿ ಕೇಳಲು ಕರೆ ಬಂದ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿದ ಅನುರಾಧ ಹೊಳ್ಳರಿಗೆ ಅವುಗಳು ಸ್ತಬ್ಧಗೊಂಡಿರುವುದರಿಂದ ವಂಚನೆ ನಡೆದಿರುವುದು ತಿಳಿಯಿತು. ಆರೋಪಿಗಳೆಲ್ಲರೂ ಅನುರಾಧ ಹೊಳ್ಳ ರಿಗೆ ಪತಂಜಲಿ ಆರ್ಯುವೇದದ ವ್ಯವಹಾರ ನೀಡದೆ ಅವರಿಂದ ಒಟ್ಟು 7.75 ಲಕ್ಷ ರೂ.ವನ್ನು ಖಾತೆಗೆ ಜಮಾ ಮಾಡಿಸಿ ಮೋಸ, ವಂಚನೆ ಎಸಗಿರುವುದಾಗಿ ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News