×
Ad

ಸಂವಿಧಾನ ಈ ದೇಶದ ಪರಮೋಚ್ಚ ಕಾನೂನು : ನ್ಯಾ. ಮಂಜುನಾಥ

Update: 2018-11-27 00:12 IST

ಪುತ್ತೂರು,ನ.26: ಭಾರತವು ಅತ್ಯಂತ ದೊಡ್ಡ ಮತ್ತು ಬಲಿಷ್ಟ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಸಂವಿಧಾನವು ಈ ದೇಶದ ಪರಮೋಚ್ಛ ಕಾನೂನಾಗಿದೆ ಎಂದು ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಧೀಶರು ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಮಂಜುನಾಥ ಹೇಳಿದರು. 

ಅವರು ಸೋಮವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪುತ್ತೂರು ವಕೀಲರ ಸಂಘ, ಪ್ರಗತಿ ಸ್ಟಡಿ ಸೆಂಟರ್ ಮತ್ತು ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ನ. 26 ಸಂವಿಧಾನ ದಿನಾಚರಣೆ ಮತ್ತು ಕಾನೂನು ದಿನಾಚರಣೆಯಾಗಿ ಆಚರಿಸಲ್ಪಡುತ್ತಿದೆ, ಈ ದೇಶದ ಸಂವಿಧಾನ ಮತ್ತು ಕಾನೂನುಗಳು ಸಮಯ ಸಂದರ್ಭಕ್ಕೆ ಅನುಗುಣವಾಗಿ ತಿದ್ದುಪಡಿಗೆ ಒಳಗಾಗಿವೆ. ಆಯಾ ರಾಜ್ಯಗಳಲ್ಲಿ ಸಂವಿಧಾನದ ಚೌಕಟ್ಟಿಗೆ ಪೂರಕವಾಗಿ ಹೊಸ ಹೊಸ ಕಾನೂನುಗಳು ಜಾರಿಗೆ ಬಂದಿವೆ. ನಮ್ಮ ಸಂವಿಧಾನವು ಸ್ವಾತಂತ್ರ್ಯ ಪೂರ್ವದ ಬ್ರಿಟೀಷರ ಆಳ್ವಿಕೆಯ ಕಾಲದಲ್ಲಿ ಜಾರಿಯಲ್ಲಿದ್ದ ಕೆಲವೊಂದು ಕಾನೂನುಗಳನ್ನು ಈಗಲೂ ಅನುಷ್ಠಾನದಲ್ಲಿ ಇರಿಸಿಕೊಂಡಿದೆ. ಸಮಾಜದಲ್ಲಿ ಎಲ್ಲರಿಗೂ ಕಾನೂನಿನ ಅರಿವು ಮುಖ್ಯ. ಕಾನೂನಿನ ಅರಿವು ಜ್ಞಾನದ ಪರೀದಿಯನ್ನು ವಿಸ್ತರಿಸುತ್ತದೆ ಎಂದು ಹೇಳಿದರು. 

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಮಾತನಾಡಿ, ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲರಿಗೂ ಕಾನೂನಿನ ಅರಿವು ಅಗತ್ಯ, ಈ ದೇಶದ ನ್ಯಾಯಾಲಯಗಳು ಕಾನೂನಿನ ಪಾಲನೆಯ ಕುರಿತಂತೆ ಹೆಚ್ಚಿನ ಗಮನ ಹರಿಸುತ್ತಿವೆ. ನ್ಯಾಯಾಂಗ ವ್ಯವಸ್ಥೆ ಕೂಡಾ ತಂತ್ರಜ್ಞಾನದಲ್ಲಿ ಮುಂದುವರಿಯುತ್ತಿರುವುದು ಶೀಘ್ರ ನ್ಯಾಯ ದಾನಕ್ಕೆ ಅನುಕೂಲವಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಪುತ್ತೂರು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ಲತಾದೇವಿ ಜಿ. ಎ., ಪ್ರಧಾನ ವ್ಯವಹಾರಿಕ ನ್ಯಾಯಾಧೀಶ ಪ್ರಕಾಶ್ ಪಿ. ಎಮ್., ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಕಿಶನ್ ಬಿ. ಮಡಲಗಿ, ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷೆ ನಯನ ರೈ, ವಕೀಲರ ಸಂಘದ ಉಪಾಧ್ಯಕ್ಷ ಮಹಾಬಲ ಗೌಡ, ಜೊತೆ ಕಾರ್ಯದರ್ಶಿ ದೀಪಕ್ ಬೊಳುವಾರು, ಕಾರ್ಯದರ್ಶಿ ಕೃಷ್ಣ ಪ್ರಸಾದ್ ರೈ ಉಪಸ್ಥಿತರಿದ್ದರು. 
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಕೆ. ಭಾಸ್ಕರ ಕೋಡಿಂಬಾಳ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಕುಂಬ್ರ ದುರ್ಗಾ ಪ್ರಸಾದ್ ರೈ ಮತ್ತು ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಅಜಯ್ ಕುಮಾರ್ ಡಿ. ಎನ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿದರು. 

ಪ್ರಗತಿ ಸ್ಟಡಿ ಸೆಂಟರ್‍ನ ಸ್ಥಾಪಕಾಧ್ಯಕ್ಷ ಪಿ. ವಿ. ಗೋಕುಲ್‍ನಾಥ್ ಸ್ವಾಗತಿಸಿದರು.  ಪ್ರಗತಿ ಸ್ಟಡಿ ಸೆಂಟರ್‍ನ ಆಂಗ್ಲ ಭಾಷಾ ಉಪನ್ಯಾಸಕಿ ವಿಸ್ಮಿತಾ ಮಧುಕರ್ ಮುಳಿಬೈಲ್ ವಂದಿಸಿದರು. ಶಿಕ್ಷಣ ಸಂಪನ್ಮೂಲ ಕೇಂದ್ರದ ಸದಸ್ಯೆ ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News