×
Ad

ಹೆಜಮಾಡಿ-ಪಡುಬಿದ್ರಿ ಮುಟ್ಟಳಿವೆ ಸೇತುವೆ: ಇಲಾಖಾಧಿಕಾರಿಗಳಿಂದ ಪರಿಶೀಲನೆ

Update: 2018-11-27 21:12 IST

ಪಡುಬಿದ್ರಿ, ನ. 27: ಸಮುದ್ರ ತೀರದಲ್ಲಿ ಹೆಜಮಾಡಿ - ಪಡುಬಿದ್ರಿ ಸಂಪರ್ಕಿಸಲು ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಮುಟ್ಟಳಿವೆ ಸೇತುವೆ ಅವೈಜ್ಞಾನಿಕ ಕಾಮಗಾರಿಯಿಂದ ಮಂಗಳವಾರ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮತ್ತು ಬಂದರು ಮೀನುಗಾರಿಕಾ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಶಶಿಕಾಂತ್ ಪಡುಬಿದ್ರಿಯವರು ಜಿಲ್ಲಾ ಪಂಚಾಯಿತಿ ಮಾಸಿಕ ಸಭೆಯಲ್ಲಿ ಸೇತುವೆ ನಿಷ್ಪ್ರಯೋಜಕವಾಗಿರುವ ಬಗ್ಗೆ ಪ್ರಸ್ತಾವಿಸಿ ಅನುದಾನ ತಡೆಹಿಡಿಯುವಂತೆ ಮನವಿ ಮಾಡಿದ್ದರು. ಶಶಿಕಾಂತ್ ಪಡುಬಿದ್ರಿ, ಕಾಮಿನಿ ಹೊಳೆ-ಸಮುದ್ರ ಸಂಗಮ ಸ್ಥಳದಲ್ಲಿ ಸೇತುವೆ ನಿರ್ಮಾಣದಿಂದ ಪಡುಬಿದ್ರಿ ಭಾಗದಲ್ಲಿ ಕೃತಕ ನೆರೆಯುಂಟಾಗಿದೆ. ಸೇತುವೆಯ ಆಳ ಕಡಿಮೆಯಾಗಿರುವ ಕಾರಣ ಸಮಸ್ಯೆ ಪರಿಹರಿಸಲಾದಷ್ಟು ದೊಡ್ಡದಾಗಿದೆ.ಅದರ ಬದಲು ಈಗ ಹೊಳೆ ನೀರು ಸಮುದ್ರ ಸೇರುವ ಜಾಗದಲ್ಲಿ ಮತ್ತೊಂದು ಸೇತುವೆ ನಿರ್ಮಿಸಬೇಕು.ಇದರಿಂದ ಹೊಳೆ ಭಾಗದ ಜನರಿಗೆ ಉಪಯೋಗವಾಗಲಿದೆ ಎಂದರು.

ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯೀ ಸಮಿತಿಯ ಅಧ್ಯಕ್ಷ ಗಣೇಶ್ ಕೋಟ್ಯಾನ್, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ಪಾಶ್ರ್ವನಾಥ್, ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉದಯ ಶೆಟ್ಟಿ, ಪಿಡಬ್ಲ್ಯುಡಿ ಇಂಜಿನಿಯರ್ ಮಿಥುನ್ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ಸಾರ್ವಜನಿಕ ಅಭಿಪ್ರಾಯ ಪರಿಗಣಿಸದೆ ಸರಕಾರಿ ಅನುದಾನವನ್ನು ನಿಷ್ಪ್ರಯೋಜಕಗೊಳಿಸಿದ ಬಗ್ಗೆ ಗಣೇಶ್ ಕೋಟ್ಯಾನ್ ಆಕ್ರೋಷ ವ್ಯಕ್ತಪಡಿಸಿದರು. ಈ ಬಗ್ಗೆ ಜಿಲ್ಲಾ ಪಂಚಾಯಿತಿಗೆ ಸಮಗ್ರ ಮಾಹಿತಿ ನೀಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಲಾಗುವುದು ಎಂದರು. ಹೊಸ ಸೇತುವೆ ನಿರ್ಮಾಣಕ್ಕೆ ಸರ್ವೇ ನಡೆಸಿ ಆದಷ್ಟು ಬೇಗ ಕ್ರಿಯಾಯೋಜನೆ ರೂಪಿಸುವುದಾಗಿ ಇಂಜಿನಿಯರ್ ಉದಯ ಶೆಟ್ಟಿ ಹೇಳಿದರು. ಬಳಿಕ ಜಿಪಂಗೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಕ್ರೋಢೀಕರಣಕ್ಕೆ ಪ್ರಯತ್ನಿಸಲಾಗುವುದು ಎಂದು ಶಶಿಕಾಂತ್ ಪಡುಬಿದ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News