93 ರೊಹಿಂಗ್ಯನ್ನರನ್ನು ಮಲೇಶ್ಯಕ್ಕೆ ಒಯ್ಯುತ್ತಿದ್ದ ದೋಣಿ ಮ್ಯಾನ್ಮಾರ್ ಪೊಲೀಸರ ವಶಕ್ಕೆ

Update: 2018-11-27 15:59 GMT

ಯಾಂಗನ್ (ಮ್ಯಾನ್ಮಾರ್), ನ. 27: 93 ರೊಹಿಂಗ್ಯಾ ಮುಸ್ಲಿಮರನ್ನು ಒಯ್ಯುತ್ತಿದ್ದ ದೋಣಿಯೊಂದನ್ನು ಮ್ಯಾನ್ಮಾರ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.

ಅವರು ರಖೈನ್ ರಾಜ್ಯದಲ್ಲಿರುವ ನಿರ್ವಸಿತ ಶಿಬಿರಗಳಿಂದ ತಪ್ಪಿಸಿಕೊಂಡು ಮಲೇಶ್ಯವನ್ನು ತಲುಪುವ ನಿರೀಕ್ಷೆಯಿಂದ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಕಳೆದ ತಿಂಗಳು ಮುಂಗಾರು ಮಳೆ ಇಳಿಮುಖವಾದ ಬಳಿಕ, ಮಲೇಶ್ಯದತ್ತ ಹೋಗುತ್ತಿದ್ದ ಹಲವಾರು ದೋಣಿಗಳನ್ನು ಮ್ಯಾನ್ಮಾರ್ ಜಲಪ್ರದೇಶದಲ್ಲಿ ತಡೆಹಿಡಿಯಲಾಗಿದೆ. ಇದು ಹೀಗೆ ತಡೆಹಿಡಿಯಲಾದ ಮೂರನೇ ದೋಣಿ ಎಂದು ಹೇಳಲಾಗಿದೆ.

‘ಶಂಕಿತ’ ದೋಣಿಯೊಂದನ್ನು ನೋಡಿರುವುದಾಗಿ ಮೀನುಗಾರರು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ದೋಣಿಯನ್ನು ವಶಪಡಿಸಿಕೊಳ್ಳಲಾಯಿತು ಎಂದು ದಕ್ಷಿಣ ಮ್ಯಾನ್ಮಾರ್‌ನ ಕರಾವಳಿ ಪಟ್ಟಣ ಡವೈನ ಅಧಿಕಾರಿಯೊಬ್ಬರು ತಿಳಿಸಿದರು.

2017ರ ಆಗಸ್ಟ್‌ನಲ್ಲಿ ಮ್ಯಾನ್ಮಾರ್ ಸೇನೆಯು ಅಲ್ಪಸಂಖ್ಯಾತ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಸಿದ ಅಮಾನುಷ ದಮನ ಕಾರ್ಯಾಚರಣೆಗೆ ಬೆದರಿ 7 ಲಕ್ಷಕ್ಕೂ ಅಧಿಕ ನಿರಾಶ್ರಿತರು ಬಾಂಗ್ಲಾದೇಶಕ್ಕೆ ಪರಾರಿಯಾಗಿರುವುದನ್ನು ಸ್ಮರಿಸಬಹುದಾಗಿದೆ.

ಮ್ಯಾನ್ಮಾರ್‌ನಲ್ಲಿಯೂ ರೊಹಿಂಗ್ಯಾ ಮುಸ್ಲಿಮರು ಬಹುಸಂಖ್ಯಾತ ಬೌದ್ಧರ ಹೆದರಿಕೆಯಿಂದ ಮನೆ, ಜಮೀನುಗಳನ್ನು ತೊರೆದು ನಿರಾಶ್ರಿತ ಶಿಬಿರಗಳಲ್ಲಿ ಅಸಹಾಯಕರಾಗಿ ದಿನಗಳೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News