ಸಾಸ್ತಾನ ಟೋಲ್‌ಗೇಟ್‌ಗೆ ಪ್ರತಿಭಟನಕಾರರಿಂದ ಮುತ್ತಿಗೆ ಯತ್ನ: ಗುತ್ತಿಗೆ ಕಂಪೆನಿ, ಪೊಲೀಸರ ವಿರುದ್ಧ ಘೋಷಣೆ
ಉಡುಪಿ, ನ. 27: ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ನೇತೃತ್ವದಲ್ಲಿ ಸುಮಾರು 400ರಿಂದ 500ರಷ್ಟಿದ್ದ ಪ್ರತಿಭಟನಕಾರರು ಇಂದು ಸಂಜೆ ಹಠಾತ್ತನೇ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸುವ ಮೂಲಕ ನಿನ್ನೆಯಿಂದ ಪ್ರಾರಂಭಗೊಂಡ ಟೋಲ್‌ಗೇಟ್ ವಿರುದ್ಧದ ಪ್ರತಿಭಟನೆ ಇಂದು ತೀವ್ರ ಸ್ವರೂಪ ಪಡೆಯಿತು.
ಆದರೆ ಅದಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಟೋಲ್‌ಗೇಟ್ ಬಳಿ ಉಪಸ್ಥಿತರಿದ್ದ ಪೊಲೀಸರು ಪ್ರತಿಭಟನಕಾರರ ಪ್ರಯತ್ನವನ್ನು ತಡೆಯುವಲ್ಲಿ ಯಶಸ್ವಿಯಾದರು. ಇದರಿಂದ ಕೆಲಹೊತ್ತು ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣ ಗೊಂಡಿತು.
ಇದೇ ವೇಳೆ ಗುತ್ತಿಗೆದಾರರ ಪರ ಹಾಗೂ ಟೋಲ್ ಸಂಗ್ರಹದ ಪರವಾಗಿದ್ದು ಟೋಲ್‌ಗೇಟ್‌ಗೆ ರಕ್ಷಣೆ ನೀಡುತ್ತಿರುವುದಾಗಿ ಆರೋಪಿಸಿ ಪೊಲೀಸರ ವಿರುದ್ಧವೂ ಪ್ರತಿಭಟನ ಕಾರರು ಆಕ್ರೋಶಗೊಂಡಿದ್ದು, ಇಂದು ಅವರ ವಿರುದ್ಧವೂ ಧಿಕ್ಕಾರಗಳನ್ನು ಕೂಗಿದರು. ಅಲ್ಲದೇ ನಿನ್ನೆ ತಮ್ಮ ಪ್ರತಿಭಟನೆಯ ವೇಳೆ ಸ್ಥಳೀಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೇ, ಅವಹೇಳನಕಾರಿಯಾಗಿ ಮಾತನಾಡಿರುವುದರೆಂದು ಆರೋಪಿಸಿ ಬ್ರಹ್ಮಾವರದ ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಕಾಂತ್ ವಿರುದ್ಧವೂ ಪ್ರತಿಭಟನಕಾರರು ತೀವ್ರ ಆಕ್ರೋಶಗೊಂಡಿದ್ದು, ಅವರ ವಿರುದ್ಧವೂ ಘೋಷಣೆ ಹಾಗೂ ಧಿಕ್ಕಾರಗಳನ್ನು ಕೂಗಿದರು.
ಸ್ಥಳೀಯ ವಾಹನಗಳಿಂದಲೂ ಟೋಲ್ ಸಂಗ್ರಹಕ್ಕೆ ಮುಂದಾದ ನವಯುಗ ಯುಗ ಕಂಪೆನಿಯ ಕ್ರಮವನ್ನು ವಿರೋಧಿಸಿ ಉಡುಪಿ ಜಿಲ್ಲಾ ರಾಷ್ಟ್ರೀಯ ಹೆದ್ದಾರಿ ಜಾಗೃತಿ ಸಮಿತಿಯ ನೇತೃತ್ವದಲ್ಲಿ ನಿನ್ನೆ ತೀವ್ರವಾದ ಪ್ರತಿಭಟನೆ ನಡೆದಿತ್ತು. ಇಂದು ಯಾವುದೇ ಪ್ರತಿಭಟನೆ ನಡೆಯದೇ ಸಂಜೆ ವೇಳೆ ಸಾಸ್ತಾನದ ಶಿವಕೃಪಾ ಕಲ್ಯಾಣಮಂಟಪದಲ್ಲಿ ಹೋರಾಟದ ಮುಂದಿನ ರೂಪುರೇಷೆಗಳ ಬಗ್ಗೆ ಚರ್ಚಿಸಲು ಸಭೆಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ಭಾರೀ ಸಂಖ್ಯೆಯ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿದ್ದು, ಕಂಪೆನಿ ಟೋಲ್ ಸಂಗ್ರಹದ ಪ್ರಯತ್ನವನ್ನು ತೀವ್ರವಾಗಿ ವಿರೋಧಿಸ ಲಾಯಿತು. ಅಲ್ಲದೇ ಶ್ರೀಕಾಂತ್ ನೀಡಿದರೆನ್ನಲಾದ ಹೇಳಿಕೆಯ ಕುರಿತೂ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವಿಷಯದಲ್ಲಿ ಸಂಸದರು ಹಾಗೂ ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ನಿಷ್ಕೃಯತೆಯ ಕುರಿತೂ ಗ್ರಾಮಸ್ಥರು ತಮ್ಮ ತೀವ್ರವಾದ ಅಸಮಧಾನವನ್ನು ಹೊರಹಾಕಿದ್ದರು.
ಸಭೆಯಲ್ಲಿ ಉಪಸ್ಥಿತರಿದ್ದು, ಪ್ರತಿಭಟನಕಾರರಿಗೆ ಸಂಪೂರ್ಣ ಬೆಂಬಲ ಘೋಷಿಸಿದ ಸ್ಥಳೀಯ ಸೈಂಟ್‌ಅಂತೋನಿ ಚರ್ಚ್‌ನ ಧರ್ಮಗುರುಗಳ ನಡೆಗೆ ಜನರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಮುಂದೆ ನಡೆಯುವ ಪ್ರತಿಭಚನೆಯ ವೇಳೆ ತಮ್ಮ ಸಮುದಾಯದ ಜನರು ಸಕ್ರೀಯವಾಗಿ ಭಾಗವಹಿಸುವಂತೆ ತಾವು ಸೂಚಿಸುವುದಾಗಿ ಅವರು ಹೇಳಿದರು.
ಸಭೆಯ ಬಳಿಕ ಒಟ್ಟುಗೂಡಿದ ಪ್ರತಿಭಟನಕಾರರು ಮೆರವಣಿಗೆಯಲ್ಲಿ ಟೋಲ್‌ಗೇಟ್‌ವರೆಗೆ ಸಾಗಿಬಂದು ಹಠಾತ್ತನೇ ಟೋಲ್‌ಗೇಟ್‌ಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಆದರೆ ಅದಾಗಲೇ ಅಲ್ಲಿ ಭಾರೀ ಸಂಖ್ಯೆಯ ಪೊಲೀಸರು ನೆರೆದಿದ್ದರಿಂದ ಪ್ರತಿಭಟನಕಾರರನ್ನು ತಡೆಯಲು ಸಾಧ್ಯವಾಯಿತು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ನೂಕಾಟ-ತಳ್ಳಾಟಗಳು ನಡೆದವು. ಇದರಿಂದ ಕೆರಳಿದ ಪ್ರತಿಭಟನಕಾರರು ಪೊಲೀಸರೊಂದಿಗೆ ಮಾತಿನ ಚಕಮಕಿಗೆ ಇಳಿದರು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಉಡುಪಿ ಡಿವೈಎಸ್ಪಿ ಜೈಶಂಕರ್, ಪ್ರತಿಭಟನಕಾರರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಪೊಲೀಸರು ಗುತ್ತಿಗೆದಾರರ ಪರವಾಗಿದ್ದು, ಸ್ಥಳೀಯರೊಂದಿಗೆ ಅನುಚಿತವಾಗಿ ವರ್ತಿಸುತಿದ್ದಾರೆ ಎಂದು ಜನರು ಆರೋಪಿಸಿದರು. ಈ ಬಗ್ಗೆ ನನಗೆ ಖಚಿತ ದಾಖಲೆ ನೀಡಿ ನಾನು ಕ್ರಮ ತೆಗೆದುಕೊಳ್ಳುತ್ತೇನೆ ಎಂದವರು ಭರವಸೆ ನೀಡಿದರು.
ಸಾಸ್ತಾನ, ಪಾಂಡೇಶ್ವರ, ಗುಂಡ್ಮಿ, ಚೇಂಪಿ ಆಸುಪಾಸಿನ ವಾಹನಗಳಿಗೆ ಟೋಲ್ ನೀಡದಂತೆ ನಾವು ನಿನ್ನೆಯೇ ತಿಳಿಸಿದ್ದೇವೆ. ಅವರಿಂದ ಟೋಲ್ ಸಂಗ್ರಹಕ್ಕೆ ಮುಂದಾದರೆ ನಾವು ನಿಮ್ಮೆಂದಿಗಿದ್ದೇವೆ ಎಂದು ಭರವಸೆ ನೀಡಿದ್ದೇವೆ ಎಂದು ಪೊಲೀಸ್ ಅಧಿಕಾರಿಗಳು ಈ ವೇಳೆ ತಿಳಿಸಿದರು. ಬಳಿಕ ಸಮಿತಿಯ ಪದಾಧಿಕಾರಿಗಳು ಪ್ರತಿಭಟನಕಾರರನ್ನು ಸಮಾಧಾನಪಡಿಸಿ ಅಲ್ಲಿಂದ ಕರೆದೊಯ್ದರು. ಈ ನಡುವೆ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸಪೂಜಾರಿ ನಾಳೆ ಈ ಕುರಿತು ಸಭೆಯೊಂದನ್ನು ಕರೆದಿದ್ದಾರೆಂದು ತಿಳಿದು ಬಂದಿದೆ.
ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್, ತಾಪಂ ಸದಸ್ಯ ಭರತ ಹೆಗ್ಡೆ, ಕಾರ್ಕಡ ರಾಜು ಪೂಜಾರಿ, ಸಮಿತಿಯ ಅಧ್ಯಕ್ಷ ಪ್ರತಾಪ್ ಶೆಟ್ಟಿ, ಕಾರ್ಯದರ್ಶಿ ಪಿಠಲ ಪೂಜಾರಿ, ಬನ್ನಾಡಿ ಸೋಮನಾಥ ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.