ಸಾಮೂಹಿಕ ಅತ್ಯಾಚಾರ ಪ್ರಕರಣ; ನಾಲ್ವರ ಬಂಧನ
ಮಂಗಳೂರು, ನ.27: ನಗರದ ಹೊರವಲಯ ತೋಟ ಬೆಂಗ್ರೆಯಲ್ಲಿ ಇತ್ತೀಚೆಗೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ನಗರ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ.
ಬೆಂಗ್ರೆ ಸ್ಯಾಂಡ್‌ಪಿಟ್ ನಿವಾಸಿಗಳಾದ ಪ್ರಜ್ವಲ್ ಸುವರ್ಣ ಯಾನೆ ಪ್ರಜ್ವಲ್ (25), ಅರುಣ್ ಯಾನೆ ಅರುಣ್ ಅಮೀನ್ (26), ತೋಟ ಬೆಂಗ್ರೆ ನಿವಾಸಿಗಳಾದ ಆದಿತ್ಯ ಸಾಲಿಯಾನ್ ಯಾನೆ ಆದಿ (25), ಅಬ್ದುಲ್ ರಿಯಾಝ್ ಯಾನೆ ರಿಯಾಝ್ (35) ಬಂಧಿತರು. ಪ್ರಕರಣದಲ್ಲಿ ಇನ್ನೂ ಮೂರು ಆರೋಪಿಗಳ ಬಂಧನಕ್ಕೆ ಬಾಕಿಯಿದ್ದು, ಕೆಲವರನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ.
ತಂಡದಲ್ಲಿ ಎಂಟು ದುಷ್ಕರ್ಮಿಗಳು !: ಮಂಗಳೂರನ್ನು ಬೆಚ್ಚಿ ಬೀಳಿಸಿದ ನಗರದ ತೋಟ ಬೆಂಗ್ರೆ ಬೀಚ್‌ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಇರುವುದು ಪತ್ತೆಯಾಗಿದೆ. ತೋಟ ಬೆಂಗ್ರೆ ಬೀಚ್‌ಗೆ ವಿಹಾರಕ್ಕೆಂದು ಬಂದಿದ್ದ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವುದು 7 ಮಂದಿ ತಂಡವಲ್ಲ. ಬದಲಾಗಿ 8 ಮಂದಿ ದುಷ್ಕರ್ಮಿಗಳ ತಂಡ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ತೋಟ ಬೆಂಗ್ರೆ ಬೀಚ್‌ಗೆ ಸಂತ್ರಸ್ತರನ್ನು ಕರೆತಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಎಸಿಪಿ ಮಂಜುನಾಥ ಶೆಟ್ಟಿ, ಪಣಂಬೂರು ಹಾಗೂ ಮಹಿಳಾ ಠಾಣೆ ಇನ್‌ಸ್ಪೆಕ್ಟರ್, ಸಿಬ್ಬಂದಿ ಜೊತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಕರಣದ ವಿವರ: ತೋಟ ಬೆಂಗ್ರೆಯಲ್ಲಿ ನ.18ರಂದು ಯುವಕ-ಯುವತಿಯರಿಬ್ಬರು ವಿಹಾರಕ್ಕೆ ತೆರಳಿದ್ದು, ಯುವತಿಯನ್ನು ಅಪಹರಿಸಿದ ಎಂಟು ದುಷ್ಕರ್ಮಿಗಳ ತಂಡವೊಂದು ಸಾಮೂಹಿಕ ಅತ್ಯಾಚಾರ ಎಸಗಿತ್ತು. ದ.ಕ. ಜಿಲ್ಲೆಯ ಹಳ್ಳಿ ಪ್ರದೇಶವೊಂದರ ಯುವತಿಯು ಕಾರ್ಖಾನೆಯೊಂದರಲ್ಲಿ ಕೂಲಿಗೆ ಹೋಗುತ್ತಿದ್ದಳು. ಹೊರರಾಜ್ಯದ ಯುವಕನೊಂದಿಗೆ ಸ್ನೇಹವಿತ್ತು. ಆತನೊಂದಿಗೆ ನ.18ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ತೋಟ ಬೆಂಗರೆಗೆ ಬಂದಿದ್ದಳು. ಇಬ್ಬರೂ ಜೊತೆಗೂಡಿ ದ್ವೀಪದ ಒಳಪ್ರದೇಶಕ್ಕೆ ತೆರಳಿದ್ದರು.
ಯುವಕ ಮತ್ತು ಯುವತಿ ಒಟ್ಟಾಗಿ ಇರುವುದನ್ನು ಗಮನಿಸಿದ ಸ್ಥಳೀಯ ಯುವಕರು, ಇಬ್ಬರನ್ನೂ ಬೆದರಿಸಿದ್ದಾರೆ. ಯುವಕನ ಮೇಲೆ ಹಲ್ಲೆ ನಡೆಸಿ, ಯುವತಿಯನ್ನು ಎಳೆದೊಯ್ದು ದೌರ್ಜನ್ಯ ನಡೆಸಿದ್ದಾರೆ. ಯುವತಿ ಈ ಕುರಿತು ಯಾವುದೇ ದೂರು ನೀಡಿರಲಿಲ್ಲ. ಸೋಮವಾರ ಬಿ.ಸಿ.ರೋಡಿನ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆಂದು ಬಂದ ಸಂದರ್ಭ ಸಂಶಯ ಗೊಂಡ ವೈದ್ಯರು ವಿಚಾರಿಸಿದಾಗ ಯುವತಿ ನಡೆದ ಘಟನೆಯನ್ನು ವಿವರಿಸಿದ್ದರು.
ಮಾಹಿತಿಯನ್ನು ಆಧರಿಸಿ ಸಂತ್ರಸ್ತ ಯುವತಿಯನ್ನು ಪತ್ತೆ ಮಾಡಿರುವ ನಗರ ಪೊಲೀಸರು, ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದರು. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಪೊಲೀಸರು ಸೆಕ್ಷನ್ 376ಡಿ, 323, 504, 506ರ ಅಡಿ ಪ್ರಕರಣ ದಾಖಲಿಸಿದೆ.
ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ನಿರ್ದೇಶನದಂತೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಹನುಮಂತರಾಯ, ಅಪರಾಧ ಮತ್ತಯ ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್ ಮಾರ್ಗದರ್ಶನದಂತೆ ಮಂಗಳೂರು ಸಂಚಾರ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ನೇತೃತ್ವದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ., ಮಂಗಳೂರು ಮಹಿಳಾ ಠಾಣಾ ಪೊಲೀಸ್ ಇನ್‌ಸ್ಪೆಕ್ಟರ್ ಕಲಾವತಿ, ಪಣಂಬೂರು ಠಾಣಾ ಪಿಎಸ್ಸೈ ಉಮೇಶ್‌ಕುಮಾರ್ ಎಂ.ಎನ್. ಹಾಗೂ ಮಂಗಳೂರು ನಗರ ಉತ್ತರ ಉಪ-ವಿಭಾಗ ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿ, ಎಎಸ್ಸೈ ಮುಹಮ್ಮದ್, ಕುಶಲ ಮಣಿಯಾಣಿ, ವಿಜಯ ಕಾಂಚನ್, ಸತೀಶ್ ಎಂ., ಶರಣ್ ಕಾಳಿ ಮತ್ತು ಪಣಂಬೂರು ಪೊಲೀಸ್ ಠಾಣಾ ಅಧಿಕಾರಿ ಸಿಬ್ಬಂದಿ ಶ್ರಮಿಸಿದ್ದಾರೆ.
ಪ್ರಕರಣಕ್ಕೆ ಮರುಜೀವ ನೀಡಿದ ಪೊಲೀಸರು
ನ.18ರಂದು ನಡೆದಿದ್ದ ಈ ಅತ್ಯಾಚಾರ ಪ್ರಕರಣಕ್ಕೆ ಪೊಲೀಸರೇ ಮರುಜೀವ ನೀಡಿದ್ದಾರೆ. ಒಂದು ಹಂತದಲ್ಲಿ ಮುಚ್ಚಿಹೋಗಲಿದ್ದ ಈ ಘೋರ ಅತ್ಯಾಚಾರ ಪ್ರಕರಣವನ್ನು ಬೆಳಕಿಗೆ ತಂದದ್ದು ಪಣಂಬೂರು ಪೊಲೀಸರು. ವಿವಿಧ ಮೂಲಗಳಿಂದ ದೊರೆತ ಮಾಹಿತಿ ಮೇರೆಗೆ ಪಣಂಬೂರು ಪೊಲೀಸರು ತನಿಖೆ ಆರಂಭಿಸಿದ್ದರು. ಸಾಕಷ್ಟು ಜನರ ವಿಚಾರಣೆ ಬಳಿಕ ಸಂತ್ರಸ್ತರ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಪೊಲೀಸರು, ಅವರ ಮನವೊಲಿಸಿದ ಹಿನ್ನೆಲೆ ಸಂತ್ರಸ್ತರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆದರೆ ಸಂತ್ರಸ್ತ ಜೋಡಿಯ ಮಾಹಿತಿ ಗೋಪ್ಯವಾಗಿ ಇರಿಸಲಾಗಿದೆ.
ಅತ್ಯಾಚಾರ ಆರೋಪಿಗಳ ವಿರುದ್ಧ ಸೂಕ್ರ ಕ್ರಮ: ಪೊಲೀಸ್ ಆಯುಕ್ತ
ಅತ್ಯಾಚಾರ ಪ್ರಕರಣವು ನ.26ರಂದು ಮಂಗಳೂರು ನಗರ ಪೊಲೀಸ್ ಗಮನಕ್ಕೆ ಬಂದಿದೆ. ಆರೋಪಿಗಳ ಗಾಂಜಾ ಸೇವನೆ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ. ಎಲ್ಲ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ತಿಳಿಸಿದ್ದಾರೆ.
ಮಾದಕ ವ್ಯಸನ ಜಾಲ ?
ತೋಟಬೇಂಗ್ರೆ ಪ್ರದೇಶವು ಸಮುದ್ರ ಹಾಗೂ ಫಲ್ಗುಣಿ ನಡುವೆ ಇರುವುದರಿಂದ ಪ್ರವಾಸಿಗಳು ಹಾಗೂ ದೂರದ ಊರುಗಳಿಂದ ಪರಿಸರ ವೀಕ್ಷಣೆಗೆ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ತೋಟಬೆಂಗ್ರೆ ಪ್ರದೇಶದಲ್ಲಿ ಮಾದಕ ವ್ಯಸನ ಜಾಲ ಹರಡಿದ್ದು, ಈ ಬಗ್ಗೆ ಹಲವು ಆರೋಪಗಳು ಕೇಳಿಬರುತ್ತಿದ್ದವು. ಅತ್ಯಾಚಾರ ನಡೆಸಿದ ತಂಡದ ಏಳು ಮಾದಕ ವ್ಯಸನಗಳೆಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆಯೂ ಪೊಲೀಸ್ ಇಲಾಖೆ ತನಿಖೆ ನಡೆಸಿದೆ.