ಆರ್‌ಬಿಐಗೆ ಈಗಿನ ಮೀಸಲು ನಿಧಿ ಅತ್ಯಗತ್ಯ: ಊರ್ಜಿತ್ ಪಟೇಲ್

Update: 2018-11-28 09:12 GMT

ಹೊಸದಿಲ್ಲಿ, ನ.28: ‘‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗ ಹೊಂದಿರುವ ಮೀಸಲು ನಿಧಿ ಅಗತ್ಯವಾಗಿದೆ ಹಾಗೂ ದೇಶದಲ್ಲಿ ಆರ್ಥಿಕ ಒತ್ತಡದ ಸನ್ನಿವೇಶಗಳು ಎದುರಾದಾಗ ಈ ನಿಧಿ ಅಗತ್ಯವಾಗಿದೆಯೇ ಹೊರತು ಸಾಮಾನ್ಯ ಅಗತ್ಯಗಳಿಗಲ್ಲ’’ ಎಂದು ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ಮಂಗಳವಾರ ಸಂಸದೀಯ ವಿತ್ತ ಸ್ಥಾಯಿ ಸಮಿತಿಯೆದುರು ಹಾಜರಾಗಿದ್ದಾಗ ಹೇಳಿದ್ದಾರೆಂದು ತಿಳಿದು ಬಂದಿದೆ.

ಸದ್ಯ ಆರ್‌ಬಿಐ ಮೀಸಲು ನಿಧಿಯಿಂದ ಹಣ ಸರಕಾರಕ್ಕೆ ವರ್ಗಾವಣೆಯಾಗುವ ಸಾಧ್ಯತೆಯೇ ಇಲ್ಲವೆಂಬುದನ್ನು ಅವರ ಈ ಹೇಳಿಕೆ ಸೂಚಿಸುತ್ತದೆ. ರಿಸರ್ವ್ ಬ್ಯಾಂಕ್ ಎಷ್ಟು ಮಿಸಲು ನಿಧಿ ಹೊಂದಿರಬೇಕೆಂಬ ವಿಚಾರವೇ ಸರಕಾರ ಮತ್ತು ಬ್ಯಾಂಕಿನ ನಡುವೆ ಸಂಘರ್ಷಕ್ಕೆ ಕಾರಣವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

ತನ್ನ ಬಳಿಯಿರುವ ಸುಮಾರು  9.7 ಲಕ್ಷ ಕೋಟಿ ರೂ. ಮೀಸಲು ನಿಧಿ, ಅಥವಾ ಬ್ಯಾಂಕಿನ ಒಟ್ಟು ಸಂಪತ್ತಿನ ಪೈಕಿ ಶೇ.28ಷ್ಟು ಇರುವ ನಿಧಿಗೆ ಯಾವುದೇ ರೀತಿಯಲ್ಲಿ ತೊಂದರೆ ಸೃಷಿಸಬಾರದು ಎಂಬ ಸ್ಪಷ್ಟ ನಿಲುವನ್ನು ಆರ್‌ಬಿಐ ಹೊಂದಿದೆ.

ಕಳೆದ ವಾರದ ರಿಸರ್ವ್ ಬ್ಯಾಂಕ್ ಆಡಳಿತ ಮಂಡಳಿಯ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ತಾನು ಹೊಂದಿರಬೇಕಾದ ಸೂಕ್ತ ಮೀಸಲು ನಿಧಿಯ ವಿಚಾರದ ಬಗ್ಗೆ ವ್ಯಾಖ್ಯಾನಿಸಲು ಒಪ್ಪಿತ್ತಾದರೂ ಹೆಚ್ಚಿನ ಹಣ ವರ್ಗಾವಣೆಯು ಆರ್‌ಬಿಐ ಮತ್ತು ವಿತ್ತ ಸಚಿವಾಲಯ ಜಂಟಿಯಾಗಿ ಸ್ಥಾಪಿಸಲಿರುವ ಸಮಿತಿ ಶಿಫಾರಸು ಮಾಡಿದರೆ ಮಾತ್ರ ಭವಿಷ್ಯದಲ್ಲಿ ಅನ್ವಯವಾಗುವುದು ಎಂದು ಸ್ಪಷ್ಟ ಪಡಿಸಿದೆ.

ಸರಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು ರಿಸರ್ವ್ ಬ್ಯಾಂಕಿನಿಂದ ನಗದು ವರ್ಗಾವಣೆಯ ಅಗತ್ಯವಿಲ್ಲವೆಂದು ಕಳೆದ ವಾರವಷ್ಟೇ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದರು. ಅರ್ಥವ್ಯವಸ್ಥೆಯ ಮೇಲೆ ಒತ್ತಡವಿಲ್ಲ ಎಂದು ಸಂಸದೀಯ ಸಮಿತಿಯೆದುರು ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News