×
Ad

ಶ್ರೀಕೃಷ್ಣ ಮಠದ ಸುವರ್ಣ ಗೋಪುರ ನಿರ್ಮಾಣಕ್ಕೆ ವಿದ್ಯುಕ್ತ ಚಾಲನೆ

Update: 2018-11-28 17:07 IST

ಉಡುಪಿ, ನ. 28: ಉಡುಪಿ ಶ್ರೀಕೃಷ್ಣ ಮಠದ ಗರ್ಭಗುಡಿಯ ಮೇಲ್ಚಾವಣಿಗೆ ಬಂಗಾರದ ತಗಡು ಹೊದಿಸುವ ಪರ್ಯಾಯ ಫಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀ ದ್ವಿತೀಯ ಪರ್ಯಾಯದ ಮಹತ್ವಾಕಾಂಕ್ಷಿ ಯೋಜನೆಯ ಪ್ರಾರಂಭೋತ್ಸವವು ಬುಧವಾರ ರಾಜಾಂಗಣದಲ್ಲಿ ವಿದ್ಯುಕ್ತವಾಗಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪರ್ಯಾಯ ಶ್ರೀ, ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡುವ ಒಂದು ವರ್ಗದ ಭಕ್ತರಾದರೆ, ಬೀದಿಯಲ್ಲಿ ನಿಂತು ಗೋಪುರದಲ್ಲಿ ದೇವರನ್ನು ಕಾಣುವ ಇನ್ನೊಂದು ವರ್ಗವೂ ಇದೆ. ಗೋಪುರಕ್ಕೆ ಬಂಗಾರದ ಹೊದಿಕೆ ಮಾಡಿಸುವುದೆಂದರೆ ಕೃಷ್ಣ ದೇವರಿಗೆ ಕವಚ ಮಾಡಿಸುವುದೆಂದು ಅರ್ಥ ಎಂದರು.

ಶ್ರೀಸೋಸಲೆ ವ್ಯಾಸರಾಜ ಮಠಾಧೀಶ ಶ್ರೀ ವಿದ್ಯಾಶ್ರೀಶತೀರ್ಥರು ಮಾತನಾಡಿ ಗುರುಗಳಾದ ಶ್ರೀ ವಿದ್ಯಾಮಾನ್ಯ ತೀರ್ಥರು ಸುವರ್ಣ ರಥ ಮಾಡಿ ಕೃಷ್ಣನಿಗೆ ಅರ್ಪಿಸಿದರೆ, ಅವರ ಶಿಷ್ಯರಾದ ಶ್ರೀವಿದ್ಯಾಧೀಶ ತೀರ್ಥರು ಸುವರ್ಣ ಗೋಪುರ ಮಾಡಿ ಗುರುಗಳ ಹಾಗೂ ಕೃಷ್ಣ ದೇವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಮಾಜಿ ಸದಸ್ಯ ಗೋ. ಮಧುಸೂಧನ್, ಉದ್ಯಮಿಗಳಾದ ಹೊಸಪೇಟೆಯ ಪತ್ತಿಗೊಂಡ ಪ್ರಭಾಕರ್, ಬೆಂಗಳೂರಿನ ನಟರಾಜ್ ರಾಧಾಕೃಷ್ಣನ್, ದಿಲೀಪ್ ಸತ್ಯ, ಉಡುಪಿ ಜಿಲ್ಲಾ ಜ್ಯುವೆಲ್ಲರ್ಸ್ ಅಸೋಸಿಯೇಶನಿನ ಅಧ್ಯಕ್ಷ ಜಯ ಆಚಾರ್ಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ವಾಸುದೇವ ಅಸ್ರಣ್ಣ, ಕಿದಿಯೂರು ಹೋಟೆಲಿನ ಭುವನೇಂದ್ರ ಕಿದಿಯೂರು ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಚಿನ್ನದ ಚೂರುಗಳನ್ನು ಕರಗಿಸಿ ಎರಕ ಹೊಯ್ದು ಅದನ್ನು ಸುತ್ತಿಗೆಯಿಂದ ಬಡಿದು ಹದಮಾಡುವ ಮೂಲಕ ಸುವರ್ಣ ಗೋಪುರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಉಡುಪಿ ಪ್ರಗತಿ ಅಸೋಸಿಯೇಷನ್‌ನ ವೆಂಕಟೇಶ್ ಶೇಟ್ ಅವರ ಮೇಲುಸ್ತುವಾರಿಯಲ್ಲಿ ಇನ್ನು ನಾಲ್ಕು ತಿಂಗಳಲ್ಲಿ ನಿರ್ಮಾಣ ಕಾರ್ಯ ಮುಗಿಯುವ ನಿರೀಕ್ಷೆ ಇದೆ. ದೈವಜ್ಞ ಸಮಾಜ ಹಾಗೂ ವಿಶ್ವಕರ್ಮ ಸಮಾಜದ ತಜ್ಞರು ಕಾಷ್ಠ, ಬೆಳ್ಳಿ ಹಾಗೂ ಚಿನ್ನದ ಕುಸುರಿ ಕೆಲಸವನ್ನು ನಿರ್ವಹಿಸಲಿದ್ದಾರೆ.

ಪರ್ಯಾಯ ಮಠದ ವ್ಯವಸ್ಥಾಪಕರಾದ ಪ್ರಹ್ಲಾದ ರಾವ್ ಅತಿಥಿಗಳನ್ನು ಸ್ವಾಗತಿಸಿದರೆ, ವಿದ್ವಾನ್ ಮೋಹನ ಆಚಾರ್ಯ ಪ್ರಾಸ್ತಾವಿಕ ಮಾತು ಗಳನ್ನಾಡಿದರು. ಡಾ.ವೆಂಕಟೇಶ ಆಚಾರ್ಯ ಕೊರ್ಲಳ್ಳಿ ಕಾರ್ಯಕ್ರಮ ನಿರೂಪಿಸಿ, ವಿದ್ವಾನ್ ಡಾ.ಗೋಪಾಲಚಾರ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News