ಗ್ರಾ.ಪಂ.ಗೆ ಪೂರ್ಣಕಾಲಿಕ ಪಿಡಿಒ ನೇಮಕಕ್ಕೆ ಆಗ್ರಹ: ವಾರಂಬಳ್ಳಿ ಪಂಚಾಯ್ ಎದುರು ಗ್ರಾಮಸ್ಥರ ಪ್ರತಿಭಟನೆ

Update: 2018-11-28 13:39 GMT

ಬ್ರಹ್ಮಾವರ, ನ. 28: ವಾರಂಬಳ್ಳಿ ಗ್ರಾಪಂನಲ್ಲಿ ಕಳೆದ ಐದಾರು ತಿಂಗಳಿನಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಇಲ್ಲದೇ ಇರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ಪೂರ್ಣಕಾಲಿಕ ಅಭಿವೃದ್ದಿ ಅಧಿಕಾರಿ ಒಬ್ಬರನ್ನು ನೇಮಿಸುವಂತೆ ಆಗ್ರಹಿಸಿಗ್ರಾಮಸ್ಥರು ಬುಧವಾರ ವಾರಂಬಳ್ಳಿ ಪಂಚಾಯಿತಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಕಳೆದ 5 ವರ್ಷಗಳಿಂದ ಗ್ರಾಪಂನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಪ್ರಾಮಾಣಿಕ ಕರ್ತವ್ಯ ಸಲ್ಲಿಸುತ್ತಿದ್ದ ದಿವ್ಯಾ ಅವರನ್ನು ಏಕಾಏಕಿಯಾಗಿ ತಾಲೂಕು ಪಂಚಾಯಿತಿ ಗೆ ವರ್ಗಾಯಿಸಲಾಗಿದೆ. ಗ್ರಾಪಂಗಾಗಲೀ, ಇಲ್ಲಿನ ಸಿಬ್ಬಂದಿಗಳಿಗಾಗಲೀ, ಗ್ರಾಮಸ್ಥರಿಗಾಗಲಿ ಯಾವುದೇ ಧಕ್ಕೆ ಮಾಡದೇ ಇದ್ದರೂ ಸುಳ್ಳು ಆರೋಪ ಹೊರಿಸಿ ಅವರನ್ನು ಉದ್ದೇಶ ಪೂರಕವಾಗಿ ಸುಮಾರು 50 ದಿನಗಳ ಕಾಲ ರಜೆಯಲ್ಲಿದ್ದ ಸಂದರ್ಭ ಈ ವರ್ಗಾವಣೆ ಮಾಡಲಾಗಿದೆ. ಇದರಿಂದ ನಮೂನೆ 9 ಮತ್ತು 11ರಂತಹ ಸಮಸ್ಯೆಗಳಿಗೆ ಸಹಿ ಇಲ್ಲದೇ ಗ್ರಾಮಸ್ಥರು ಪರದಾಡು ವಂತಾಗಿದೆ ಎಂದು ಗ್ರಾಮಸ್ಥರು ದೂರಿದರು.

ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯ ಆರೋಪವನ್ನು ತೆರವುಗೊಳಿಸಿ ಅವರನ್ನು ಪಂಚಾಯಿತಿಗೆ ಪುನಃ ಕರೆಸಿಕೊಂಡು, ಪಿಡಿಓ ಸ್ಥಾನಕ್ಕೆ ಮರುನೇಮಕ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಶಾಸಕರಿಗೆ ಮನವಿ ಮಾಡಿದ್ದೇವೆ ಎಂದು ಪ್ರತಿಭಟನಕಾರರು ತಿಳಿಸಿದರು.

ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯರಾದ ರಾಜೇಶ್ ಶೆಟ್ಟಿ ಬಿರ್ತಿ, ಕ್ರಿಸ್ಬಿನ್, ಹೇಮಾ ಶೆಟ್ಟಿಗಾರ್, ಕವಿತಾ, ಗೋಪಾಲ ದೇವಾಡಿಗ, ಸದಾನಂದ ಪೂಜಾರಿ, ತಾಪಂ ಮಾಜಿ ಸದಸ್ಯೆ ನಾಗವೇಣಿ, ಗ್ರಾಮಸ್ಥರಾದ ಉಲ್ಲಾಸಕುಮಾರ್, ಗಾಡ್ವಿನ್ ಮಿನೇಜಸ್, ಉದಯ್, ಪುರಂದರ, ಕರುಣಾಕರ, ಗಣೇಶ್, ಪ್ರಶಾಂತ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News