79ನೇ ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ ಕ್ರೀಡಾಕೂಟ: ಮಂಗಳೂರು ವಿ.ವಿ ಗೆ ಸಮಗ್ರ ಪ್ರಶಸ್ತಿ
ಮೂಡುಬಿದಿರೆ, ನ.28: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಜಂಟಿ ಆಶ್ರಯದಲ್ಲಿ ಕಳೆದ 5 ದಿನಗಳಿಂದ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆದ 79ನೇ ಅಖಿಲ ಭಾರತ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ 188 ಅಂಕಗಳೊಂದಿಗೆ ಮಂಗಳೂರು ವಿವಿ ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕೊಟ್ಟಾಯಂನ ಮಹಾತ್ಮಗಾಂಧಿ ವಿವಿ 109 ಅಂಕಗೊಂದಿಗೆ ರನ್ನರ್ ಅಫ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಮಹಿಳೆಯರ ವಿಭಾಗದಲ್ಲಿ 78 ಅಂಕ ಪಡೆದ ಮಂಗಳೂರು ವಿವಿ ಪ್ರಥಮ ಸ್ಥಾನ ಪಡೆದರೆ ಕೊಟ್ಟಾಯಂ ನ ಮಹಾತ್ಮಗಾಂಧಿ ವಿವಿ 74 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದೆ. ಇದೇ ವಿಭಾಗದಲ್ಲಿ 33 ಅಂಕದೊಂದಿಗೆ ಕ್ಯಾಲಿಕಟ್ ವಿವಿ ತೃತೀಯ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡಿದೆ.
ಪುರುಷರ ವಿಭಾಗದಲ್ಲಿ 110 ಅಂಕ ಪಡೆದ ಮಂಗಳೂರು ವಿವಿ ಪ್ರಥಮ ಸ್ಥಾನ ಗಳಿಸಿದರೆ ಕೊಟ್ಟಾಯಂ ನ ಮಹಾತ್ಮಗಾಂಧಿ ವಿವಿ 40 ಅಂಕ ಪಡೆದು ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿದೆ. ಇದೇ ವಿಭಾಗದಲ್ಲಿ 36 ಅಂಕದೊಂದಿಗೆ ಕ್ಯಾಲಿಕಟ್ ವಿವಿ ತೃತೀಯ ಸ್ಥಾನವನ್ನು ಪಡೆದುಕೊಂಡಿದೆ. ಮಹಿಳಾ ವಿಭಾಗ ಹಾಗೂ ಪುರುಷರ ವಿಭಾಗದಲ್ಲಿ ಭಾರತಿ ದಾಸನ್ ವಿವಿ ತಿರುಚನಾಪಳ್ಳಿಯ ಧನಲಕ್ಷ್ಮೀ ಎಸ್ ಮತ್ತು ಮುಂಬೈ ವಿವಿಯ ಶಾ ಜೈ ಪ್ರದೀಪ್ ನೀಲಂ ಉತ್ತಮ ಕ್ರೀಡಾಪಟುಗಳಾಗಿ ಮೂಡಿಬಂದಿದ್ದಾರೆ.