×
Ad

ಕ್ರೀಡಾ ಚಟುವಟಿಕೆಗಳಿಗೆ ಸಹಕಾರ ನೀಡಲು ಸರ್ಕಾರದ ಕೊಂಡಿಯಂತೆ ಕಾರ್ಯನಿರ್ವಹಿಸುವೆ- ಕೆ.ಅಭಯಚಂದ್ರ ಜೈನ್

Update: 2018-11-28 20:05 IST

ಮೂಡುಬಿದಿರೆ, ನ.28: ಸಿದ್ದರಾಮಯ್ಯ ಸರ್ಕಾರ ಕ್ರೀಡಾಕೂಟ ನಡೆಯುವ ಮೊದಲೇ ಅನುದಾನವನ್ನು ಕೊಟ್ಟಿದೆ. ಈ ಕ್ರೀಡಾಕೂಟಕ್ಕೆ ಅನುಕೂಲವಾಗು ವಂತೆ ಸರ್ಕಾರದಿಂದ ಅನುದಾನ ಕೊಡಿಸುವ ಕೆಲಸವನ್ನು ನಾನು ಶೀಘ್ರವಾಗಿ ಪ್ರಾರಂಭಿಸುತ್ತೇನೆ. ಕ್ರೀಡಾ ಚಟುವಟಿಕೆಯು ಮುಂದುವರಿಯುವಂತೆ ಮಾಡಲು ಸರ್ಕಾರದ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ಯುವಜನ ಸೇವೆ ಮತ್ತು ಮೀನುಗಾರಿಕೆ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ತಿಳಿಸಿದರು.

ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಜಂಟಿ ಆಶ್ರಯದಲ್ಲಿ ಕಳೆದ 5 ದಿನಗಳಿಂದ ಮೂಡುಬಿದಿರೆಯ ಸ್ವರಾಜ್ಯ ಮೈದಾನ ದಲ್ಲಿ ನಡೆದ 79ನೇ ಅಖಿಲ ಭಾರತ ಅಥ್ಲೆಟಿಕ್ಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದದಲ್ಲಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಮುಖ್ಯ ಅತಿಥಿಯಾಗಿ ಎಸ್‍ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ ಯಶೋವರ್ಮ ಭಾಗವಹಿಸಿ ಮಾತನಾಡಿ ಓರ್ವ ವಿದ್ಯಾರ್ಥಿಗೆ ಮಾರ್ಗದರ್ಶನ ದೊರೆತರೆ ಏನನ್ನೂ ಸಾಧಿಸಬಹುದೆಂಬುದಕ್ಕೆ ಆಳ್ವಾಸ್ ಸಂಸ್ಥೆಯ ಸಾಧನೆಯ ವೈಖರಿಯೇ ಮಾದರಿಯಾಗಿದೆ, ನಮ್ಮ ದೇಶದ ಯುವಕರಲ್ಲಿ ಕ್ರೀಡೆಯಲ್ಲಿ ಮಹತ್ತರವಾದದನ್ನು ಸಾಧಿಸುವ ಸಾಮಥ್ರ್ಯವಿದೆ. ಆದರೆ ಅದಕ್ಕೆ ಅಗತ್ಯವಿರುವ ಪ್ರೋತ್ಸಾಹ ಮತ್ತು ಬೆಂಬಲ ದೊರೆಯುತ್ತಿಲ್ಲವಷ್ಟೇ ಎಂದರು.

"ಪ್ರತೀ ಬಾರಿ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಕ್ರೀಡಾ ಸಾಧನೆಯನ್ನು, ಇಲ್ಲಿನ ಜನಸಂಖ್ಯೆಯ ಆಧಾರದಲ್ಲಿ ವಿಶ್ಲೇಷಿಸಲಾಗುತ್ತದೆ. ಆದರೆ ಇದು ಸರಿಯಾದ ರೀತಿಯಲ್ಲ. ಕ್ರೀಡಾ ಪರಿಷ್ಕರಣೆ ಎಷ್ಟು ಮಂದಿ ಯುವಕರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗು ತ್ತದೆ. ಈ ನಿಟ್ಟಿನಲ್ಲಿ ಗಮನಿಸಿದಾಗ ನಾವು ಬೆಳೆಯಬೇಕಿರುವುದು ಸಾಕಷ್ಟಿದೆ" ಎಂದು ತಿಳಿಸಿದರು.

ಕ್ರೀಡಾಕೂಟದ ಕಾರ್ಯಕಾರಿ ಅಧ್ಯಕ್ಷ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ "ನಮ್ಮದು ಯುವ ಪ್ರಧಾನ ರಾಷ್ಟ್ರ ಎಂದು ಹೇಳಿಕೊಳ್ಳಲಾಗುತ್ತದೆ. ಆದರೆ ಇಂಥಹ ಶ್ರೇಷ್ಠ ಯುವಶಕ್ತಿಯ ಬಳಕೆ ಎಷ್ಟರ ಮಟ್ಟಿಗೆ ನಡೆಯುತ್ತದೆ ಎಂಬುದು ಇಲ್ಲಿ ಮುಖ್ಯ. ನಮ್ಮ ದೇಶದ ಚುಕ್ಕಾಣಿ ಹಿಡಿದಿರುವವರು, ನಮ್ಮ ಯುವಶಕ್ತಿಯನ್ನು ಭಾವನಾತ್ಮಕವಾಗಿ ಬೆಳೆಸುವ ಕಾರ್ಯದಲ್ಲಿ ತೊಡಗಿದೆ. ಆದರೆ ನಾನಿಂದು ಹೇಳುತ್ತೇನೆ, ಅವರನ್ನು ಭಾವನಾತ್ಮಕವಾಗಿ ಅಲ್ಲ, ಬದಲಿಗೆ ಕ್ರಿಯಾತ್ಮಕ ರೀತಿಯಲ್ಲಿ ರೂಪಿಸಿ" ಎಂದು ತಿಳಿಸಿದರು.

"ನಮ್ಮ ದೇಶದ ಯುವಕರ ಸಂಖ್ಯೆ ಸುಮರು 20 ಕೋಟಿಯಷ್ಟಿದೆ. ಆದರೆ ಸಾಂಸ್ಕೃತಿಕ, ಕ್ರೀಡೆ, ಎನ್‍ಸಿಸಿ, ಎನ್‍ಎಸ್‍ಎಸ್ ಈ ಎಲ್ಲಾ ಆಯಾಮಗಲ್ಲಿ ಚಿಂತಿಸಿ ದಾಗ ಸಾಮರ್ಥ್ಯವಿದ್ದರೂ ಅವರು ಅಂತರಾಷ್ಟ್ರೀಯ ಮಟ್ಟದಲ್ಲಿ ಸೋಲುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮಲ್ಲಿನ ಪ್ರೋತ್ಸಾಹದ ಮನಸ್ಸುಗಳ ಕೊರತೆ ಮತ್ತು ಸರ್ಕಾರದ ನಿಷ್ಕಾಳಜಿ. ವೋಟಿಗಾಗಿ ಸಾಕಷ್ಟು ನಾಟಕ ಮಾಡುವ ನಮ್ಮ ರಾಜಕಾರಣಿಗಳು, ಅಧಿಕಾರ ಹಿಡಿದಾಗ ಯುವಕರ ಬೆಳವಣಿಗೆಗೆ ಶ್ರಮಿಸು ವುದಿಲ್ಲ. ಬದಲಿಗೆ ಅವರನ್ನು ದೂರುವ ಕೆಲಸದಲ್ಲಿ ತೊಡಗುತ್ತಾರೆ. ಇಂಥಹ ಸರ್ಕಾರಗಳಿಗೆ ಯುವಕರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ" ಎಂದು ಕಿಡಿಕಾರಿದರು.

"ಈ ಎಲ್ಲಾ ಆಯಾಮಗಳನ್ನು ಪರಿಗಣಿಸಿಯೇ ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ. ಅವರಿಗೆ ಸೂಕ್ತ ರೀತಿಯ ಪ್ರೋತ್ಸಾಹ, ಮಾರ್ಗದರ್ಶನ ಖಂಡಿತ ದೊರೆಯಬೇಕು" ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಂಗಳೂರು ವಿವಿಯ ಹೆಮ್ಮೆಯ ಕ್ರೀಡಾಪಟುಗಳಾದ ಪ್ರವೀಣ್ ಚಿತ್ರವೇಲ್ (1,00,000 ರೂ ನಗದು ಬಹುಮಾನ ಸಹಿತ), ಇಲಕ್ಯಾದಾಸನ, ಅಭಿನಯ ಶೆಟ್ಟಿ ಹಾಗೂ ಪ್ರಜ್ವಲ್ ಮಂದಣ್ಣರನ್ನು ಸನ್ಮಾನಿಸಲಾಯಿತು. ಇದೇ ವೇಳೆ ರೀಯೋ ಒಲಂಪಿಕ್ಸ್‍ನ 4*400 ಮೀ ರಿಲೇಯಲ್ಲಿ ಭಾಗಿಯಾಗಿದ್ದ ಕ್ಯಾಲಿಕಟ್ ವಿವಿಯ ಜಿಷ್ಣ ಮ್ಯಾಥಿವ್‍ರನ್ನು ಸಮ್ಮಾನಿಸಲಾಯಿತು. ಈ ಬಾರಿಯ ಕ್ರೀಡಾಕೂಟದಲ್ಲಿ ದಾಖಲೆ ಮಾಡಿದ ಕ್ರೀಡಾಪಟುಗಳನ್ನು ಗೌರವಿಸಲಾಯಿತು.

ಮೋಹನ್ ಆಳ್ವರಿಗೆ ಗೌರವ

ಮಂಗಳೂರು ವಿವಿಯ ವತಿಯಿಂದ ಕ್ರೀಡಾಕೂಟಯ ಆಯೋಜನೆಯಲ್ಲಿ ಎಲ್ಲಾ ರೀತಿಯಿಂದಲೂ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ ಡಾ. ಎಂ. ಮೋಹನ್ ಆಳ್ವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಾಜಿ ಕ್ರೀಡಾಪಟು ಸುಕುಮಾರನ್, ಅಖಿಲ ಭಾರತ ಕ್ರೀಡಾ ವೀಕ್ಷಕರಾದ ಎಸ್. ಆರ್.ಎಮ್ ವಿವಿಯ ಕ್ರೀಡಾ ನಿರ್ದೇಶಕ ಪ್ರೊ. ಕೆ. ವೈದ್ಯನಾಥನ್, ಮದ್ರಾಸ್ ವಿವಿಯ ಕ್ರೀಡಾ ನಿರ್ದೇಶಕ ಡಾ. ವಿ. ಮಹಾದೇವನ್ ಹಾಗೂ ಜೈಪುರದ ಮಣಿಪಾಲ ವಿವಿಯ ಕ್ರೀಡಾ ನಿರ್ದೇಶಕಿ ಡಾ. ರೀನಾ ಪೂನಿಯಾ ಉಪಸ್ಥಿತರಿದ್ದರು. ಮಂಗಳೂರು ವಿವಿಯ ದೈಹಿಕ ನಿರ್ದೇಶಕ ಡಾ ಕಿಶೋರ್ ಕುಮಾರ್ ವಂದಿಸಿದರು. ಕ್ರೀಡಾ ಉದ್ಘೋಷಕರಾದ ಸತೀಶ್ ಮತ್ತು ಮುತ್ತು ನಿರೂಪಿಸಿದರು.

ಅಖಿಲ ಭಾರತ ಅಂತರ್ ವಿವಿ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪುರುಷರ ವಿಭಾಗದಲ್ಲಿ ಮಂಗಳೂರು ವಿವಿ ಸತತ ಮೂರು ಬಾರಿ ಹಾಗೂ ಮಹಿಳಾ ವಿಭಾಗವು ಮೊದಲ ಬಾರಿಗೆ ಸಮಗ್ರ ಪ್ರಶಸ್ತಿಯನ್ನು ಪಡೆದಿದೆ. ಇದರಲ್ಲಿ ಬಹುತೇಕ ಕ್ರೀಡಾಪಟುಗಳು ಆಳ್ವಾಸ್ ಸಂಸ್ಥೆಯ ಕ್ರೀಡಾಪಟುಗಳಾಗಿರುವುದು ವಿಶೇಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News