ಕೊರಗ ಸಮುದಾಯಕ್ಕೆ ಪ್ರಥಮ ರಾಜ್ಯೋತ್ಸವ ಪ್ರಶಸ್ತಿ ಗರಿ: ಶತಾಯುಷಿ ಡೋಲು ಕಲಾವಿದ ಗುರುವ ಕೊರಗರ ಸಾಧನೆ

Update: 2018-11-28 15:20 GMT

ಉಡುಪಿ, ನ. 28: ಡೋಲು ನುಡಿಸುವುದರ ಮೂಲಕ ಜನಪದ ಸಂಸ್ಕೃತಿಯ ಅನನ್ಯತೆಯನ್ನು ಪರಿಚಯಿಸುತ್ತಿರುವ ಶತಾಯುಷಿ ಡೋಲು (ಕಡ್ಡಾಯಿ) ಕಲಾವಿದ ಗುರುವ ಕೊರಗ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಮೂಲಕ ಕೊರಗ ಸಮುದಾಯಕ್ಕೆ ಪ್ರಪ್ರಥಮ ರಾಜ್ಯೋತ್ಸವ ಪ್ರಶಸ್ತಿಯ ಗರಿ ಲಭಿಸಿದಂತಾಗಿದೆ.

ತುಳುನಾಡಿನ ಜಾನಪದಿಯ ಸಂಸ್ಕೃತಿಯನ್ನು ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಮೂಲಕ ಇವರು ನೆಲದ ಮಣ್ಣಿಗೆ ಹಾಗೂ ಇಡೀ ಕೊರಗ ಸಮುದಾಯಕ್ಕೆ ಕೀರ್ತಿ ತಂದಿದ್ದಾರೆ.

ಕೊರಗ ಬುಡಕಟ್ಟು ಸಮುದಾಯಕ್ಕೆ ಸೇರಿದ 102 ವರ್ಷ ವಯಸ್ಸಿನ ಗುರುವ ಕೊರಗ ಹಿರಿಯಡ್ಕದ ಗುಡ್ಡೆ ಅಂಗಡಿಯ ಬಲ್ಕೋಡಿ ನಿವಾಸಿಯಾಗಿದ್ದಾರೆ. ಡೋಲು ಕಲಾವಿದ ಹಿರಿಯಡ್ಕದ ತೋಮ ಮತ್ತು ತುಂಬೆ ದಂಪತಿ ಪುತ್ರರಾಗಿರುವ ಇವರು, 12ನೆ ವಯಸ್ಸಿನಿಂದಲೂ ಡೋಲು ಬಾರಿಸುವುದು ಮತ್ತು ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಅವರು ಮಕ್ಕಳು, ಮೊಮ್ಮಕ್ಕಳೊಂದಿಗೆ ಸರಳ ಜೀವನ ನಡೆಸುತ್ತಿದ್ದಾರೆ.

ಶತಾಷಿಯಾದರೂ ಇವರ ಡೋಲು ಭಾರಿಸುವ ಉತ್ಸಾಹ ಇನ್ನೂ ಕುಂದಿಲ್ಲ. ಹಿರಿಯಡ್ಕ, ಕಣಜಾರು ಜಾತ್ರೆ, ಗರಡಿ ಉತ್ಸವ, ಕೋಲ ಹಾಗೂ ಸುತ್ತ ಮುತ್ತಲ ಗ್ರಾಮಗಳಲ್ಲಿ ನಡೆಯುವ ಕಂಬಳಗಳಿಗೆ ಗುರುವರ ಡೋಲು ಬಡಿತ ಮೆರುಗು ತುಂಬುತ್ತದೆ. ಗುರುವ ಕೊರಗರೊಂದಿಗೆ ಅವರ ಅಳಿಯ ಸೇರಿದಂತೆ ಇತರೆ ನಾಲ್ಕೈದು ಮಂದಿ ತಂಡವಾಗಿ ಸೇರಿ ಡೋಲು ಬಾರಿಸುತ್ತಾರೆ.

ಸರಕಾರದಿಂದ ಸಿಗುವ ಮಾಸಾಶನ 500 ರೂ. ಗುರುವ ಕೊರಗರ ಜೀವನಕ್ಕೆ ಆಧಾರ. ಅಲ್ಲದೆ ಜಾತ್ರೆ, ಕಂಬಳ, ಉತ್ಸವದಲ್ಲಿ ಡೋಲು ಭಾರಿಸಿದರೆ ಸಿಗುವ ಗೌರವ ಧನದಲ್ಲಿ ಇವರು ಬದುಕು ಸಾಗಿಸುತ್ತಿದ್ದಾರೆ. ಅದು ಬಿಟ್ಟರೆ ಬೇರಾವುದೇ ಆದಾಯ ಮೂಲ ಇವರಿಗೆ ಇಲ್ಲ.

ತುಳುನಾಡಿನ ಡೋಲು ಸಂಸ್ಕೃತಿಯನ್ನು ಉಳಿಸಿಕೊಂಡ ಇವರ ಸಾಧನೆ ಯನ್ನು ಗುರುತಿಸಿ 2017ನೆ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಕೂಡ ಲಭಿಸಿದೆ. ಅಲ್ಲದೆ ಹಲವು ಗೌರವ ಪುರಸ್ಕಾರಕ್ಕೆ ಅವರು ಭಾಜನರಾಗಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ಗುರುವ ಕೊರಗರ ಜನ್ಮ ಶತ ಮಾನೋತ್ಮವನ್ನು ಉಡುಪಿಯಲ್ಲಿ ಆಚರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News