1984ರ ಸಿಖ್ ವಿರೋಧಿ ದಂಗೆಗಳು: 80 ಜನರ ದೋಷನಿರ್ಣಯ ಎತ್ತಿ ಹಿಡಿದ ದಿಲ್ಲಿ ಉಚ್ಚ ನ್ಯಾಯಾಲಯ

Update: 2018-11-28 16:05 GMT

ಹೊಸದಿಲ್ಲಿ,ನ.28: 1984ರ ಸಿಖ್ ವಿರೋಧಿ ದಂಗೆಗಳ ಸಂದರ್ಭದಲ್ಲಿ ದೊಂಬಿ,ಮನೆಗಳಿಗೆ ಬೆಂಕಿ ಹಚ್ಚುವಿಕೆ ಮತ್ತು ಕರ್ಫ್ಯೂ ಉಲ್ಲಂಘನೆ ಆರೋಪಗಳಲ್ಲಿ 80 ಜನರ ದೋಷನಿರ್ಣಯವನ್ನು ಬುಧವಾರ ಎತ್ತಿ ಹಿಡಿದಿರುವ ದಿಲ್ಲಿ ಉಚ್ಚ ನ್ಯಾಯಾಲಯವು,ಅವರಿಗೆ ಐದು ವರ್ಷಗಳ ಜೈಲುಶಿಕ್ಷೆಯನ್ನು ಪ್ರಕಟಿಸಿದೆ.

ವಿಚಾರಣಾ ನ್ಯಾಯಾಲಯವು ತಮ್ಮನ್ನು ತಪ್ಪಿತಸ್ಥರೆಂದು ಘೋಷಿಸಿದ್ದನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ 22 ವರ್ಷಗಳಷ್ಟು ಹಳೆಯ ಮೇಲ್ಮನವಿಗಳನ್ನು ವಜಾಗೊಳಿಸಿದ ನ್ಯಾ.ಆರ್.ಕೆ.ಗಾಬಾ ಅವರು,ಜೈಲುಶಿಕ್ಷೆಯನ್ನು ಅನುಭವಿಸಲು ತಕ್ಷಣವೇ ಶರಣಾಗುವಂತೆ ಅವರಿಗೆ ಆದೇಶಿಸಿದರು.

ದಿಲ್ಲಿಯ ತ್ರಿಲೋಕಪುರಿ ಪ್ರದೇಶದಲ್ಲಿ ದಂಗೆಗಳನ್ನು ನಡೆಸಿದ್ದಕ್ಕಾಗಿ 1984,ನ.2ರಂದು ಬಂಧಿಸಲ್ಪಟ್ಟಿದ್ದ 107 ಜನರ ಪೈಕಿ 88 ಜನರನ್ನು ತಪ್ಪಿತಸ್ಥರೆಂದು ಸೆಷನ್ಸ್ ನ್ಯಾಯಾಲಯವು 1996,ಆ.27ರಂದು ತೀರ್ಪು ನೀಡಿತ್ತು.

ತ್ರಿಲೋಕಪುರಿ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ಎಫ್‌ಐಆರ್‌ನಂತೆ ದಂಗೆಗಳಿಗೆ 95 ಜನರು ಬಲಿಯಾಗಿದ್ದರು ಮತ್ತು 100 ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು.

ಉಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದ 88 ಜನರ ಪೈಕಿ ಎಂಟು ಜನರು ವಿಚಾರಣೆಯ ಅವಧಿಯಲ್ಲಿ ನಿಧನರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News