ಅಯೋಧ್ಯೆಯಲ್ಲಿ ಶ್ರೀರಾಮ ಪ್ರತಿಮೆ ಸ್ಥಾಪನೆಗೆ ದ್ವಾರಕಾಶ್ರೀ ವಿರೋಧ

Update: 2018-11-28 16:44 GMT

ವಾರಣಾಸಿ, ನ.28: ಅಯೋಧ್ಯೆಯ ಸರಯೂ ನದಿಯ ದಂಡೆಯಲ್ಲಿ ಶ್ರೀರಾಮದ್ರನ 221 ಮೀಟರ್ ಎತ್ತರದ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಆದಿತ್ಯನಾಥ್ ಸರಕಾರದ ಪ್ರಸ್ತಾಪದ ವಿರುದ್ಧ ಉತ್ತರಪ್ರದೇಶದ ಕೆಲವು ಸ್ವಾಮೀಜಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯಲ್ಲಿ ಕಳೆದ ವಾರ ನಡೆದ ವಿಶ್ವಹಿಂದೂ ಪರಿಷತ್‌ನ ಸದಸ್ಯರು ಹಾಗೂ ಬೆಂಬಲಿಗರ ಸಭೆಯು ರಾಜಕೀಯ ಪ್ರೇರಿತ ಕಾರ್ಯಕ್ರಮವೆಂಬುದಾಗಿ ಅವರು ಬಣ್ಣಿಸಿದ್ದಾರೆ.

ನವೆಂಬರ್ 25ರಿಂದ 27ರವರೆಗೆ ಗೋವರ್ಧನ್ ಪೀಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ದ್ವಾರಕಾ-ಶಾರದಾ ಜ್ಯೋತಿರ್‌ಪೀಠದ ಸ್ವಾಮೀಜಿ ಸ್ವರೂಪಾನಂದ ಸರಸ್ವತಿ ಭಗವಾನ್ ಶ್ರೀರಾಮಚಂದ್ರನನ್ನು ರಾಜಕೀಯಕರಣಗೊಳಿಸಬಾರದೆಂದು ತಿಳಿಸಿದ್ದಾರೆ. ‘‘ಸರಕಾರವು ಕೇವಲ ಪ್ರತಿಮೆಗಳನ್ನು ಸ್ಥಾಪಿಸುತ್ತಿದೆಯೇ ಹೊರತು ದೇಗುಲವನ್ನು ನಿರ್ಮಿಸುತ್ತಿಲ್ಲ’’ ಎಂಬುದಾಗಿ ಅವರು ಹೇಳಿದ್ದಾರೆ.

ಸರಕಾರವು ಗುಜರಾತ್‌ನಲ್ಲಿ ವಲ್ಲಭಬಾಯ್ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ನಿರ್ಮಿಸಿದೆ. ಆದರೆ ಅಲ್ಲಿ ಶ್ರೀರಾಮಚಂದ್ರನ ದೇಗುಲವನ್ನು ನಿರ್ಮಿಸಬೇಕಾದ ಅಗತ್ಯವಿದೆಯೆದೆಯೇ ಹೊರತು ಪ್ರತಿಮೆಯನ್ನು ನಿರ್ಮಿಸಲು ಅಲ್ಲವೆಂಬುದಾಗಿ ಹೇಳಿದ್ದಾರೆ.

ಶ್ರೀರಾಮಚಂದ್ರ ಪ್ರತಿಮೆ ನಿರ್ಮಿಸುವ ಆದಿತ್ಯನಾಥ್ ಸರಕಾರದ ಯೋಜನೆಯು ಅಸಮರ್ಪಕ ಕ್ರಮವಾಗಿದ್ದು, ಜನತೆಯ ನಂಬಿಕೆಗೆ ವಿರುದ್ಧವಾದುದಾಗಿದೆಯೆಂದು ಹೇಳಿದ್ದಾರೆ.

ಶ್ರೀರಾಮಚಂದ್ರನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಯಾವುದೇ ಮಸೀದಿ ಅಸ್ತಿತ್ವದಲ್ಲಿರಲಿಲ್ಲವೆಂದು ಹೇಳಿದ ಶಂಕರಾಚಾರ್ಯ ಸ್ವಾಮೀಜಿ, 1992ರಲ್ಲಿ ಕರಸೇವಕರು ನಾಶಪಡಿಸಿದ ಕಟ್ಟಡವು ದೇವಾಲಯವೇ ಹೊರತು ಮಸೀದಿಯಲ್ಲವೆಂದು ಸ್ಪಷ್ಟಪಡಿಸಿದರು. ವಿವಾದಿತ ರಾಮಜನ್ಮಭೂಮಿ ಸ್ಥಳದಲ್ಲಿ ಬಾಬರಿ ಮಸೀದಿ ಅಸ್ತಿತ್ವದಲ್ಲಿತ್ತೆಂಬುದು ಶುದ್ಧ ಅಪಪ್ರಚಾರ ವಾಗಿದೆಯೆಂದು ಅವರು ಹೇಳಿದರು.

ಯಾವುದೇ ರಾಜಕೀಯ ಪಕ್ಷ ಕೂಡಾ ರಾಮಮಂದಿರವನ್ನು ನಿರ್ಮಿಸುವ ಇಚ್ಚೆಯನ್ನು ಹೊಂದಿಲ್ಲ, ಆದರೆ ಆ ವಿವಾದವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆಯೆಂದು ಶಂಕರಾಚಾರ್ಯ ಸ್ವಾಮೀಜಿ ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News