ಆರ್‌ಬಿಐ ಸ್ವಾಯತ್ತತೆ ಮೇಲೆ ಮಾರಕ ಹೊಡೆತ: ಆರ್‌ಬಿಐ ಮಾಜಿ ಉನ್ನತಾಧಿಕಾರಿ

Update: 2018-11-28 16:55 GMT

ಮುಂಬೈ, ನ.28: ನವೆಂಬರ್ 19ರಂದು ನಡೆದ ರಿಸರ್ವ್ ಬ್ಯಾಂಕ್‌ನ ಆಡಳಿತ ಮಂಡಳಿಯ ಸಭೆಯ ಅಂತ್ಯದಲ್ಲಿ ಸೌಹಾರ್ದತೆಯನ್ನು ಪ್ರದರ್ಶಿಸಲಾಗಿದ್ದರೂ ಡಿ.14ರಂದು ನಡೆಯಲಿರುವ ಮುಂದಿನ ಸಭೆಯಲ್ಲಿ ಸರಕಾರ ಆರ್‌ಬಿಐ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಗೆ ಹೆಚ್ಚಿನ ಒತ್ತಡ ಹೇರಲು ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ.

18 ಸದಸ್ಯ ಬಲದ ಆರ್‌ಬಿಐ ಆಡಳಿತ ಮಂಡಳಿಯಲ್ಲಿ ಸರಕಾರದಿಂದ ನಾಮನಿರ್ದೇಶನ ಗೊಂಡಿರುವ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಸಭೆಯಲ್ಲಿ ಸಾಲದ ಮೇಲಿನ ನಿರ್ಬಂಧಗಳ ಸಡಿಲಿಕೆ, ಆಡಳಿತ ಬದಲಾವಣೆಗೆ ಹೆಚ್ಚಿನ ಒತ್ತಡ ಬರಬಹುದು ಎಂದು ಮೂಲಗಳು ತಿಳಿಸಿವೆ. ಆರ್‌ಬಿಐ ಕಾರ್ಯನಿರ್ವಹಣೆ ಹೆಚ್ಚು ಪಾರದರ್ಶಕವಾಗಿರಬೇಕು ಮತ್ತು ಆರ್‌ಬಿಐ ಹೊಣೆಗಾರಿಕೆ ಹೆಚ್ಚಬೇಕು ಎಂಬುದು ಸರಕಾರ ಹಾಗೂ ಬಹುತೇಕ ಆಡಳಿತ ಮಂಡಳಿ ಸದಸ್ಯರ ಭಾವನೆಯಾಗಿದೆ.

ಆರ್‌ಬಿಐ ಸ್ವಾಯತ್ತತೆ ಮೇಲೆ ಮಾರಕ ಹೊಡೆತ

ಇದೀಗ ಸರಕಾರ ಹಾಗೂ ಆರ್‌ಬಿಐ ನಡುವಿನ ಸಂಬಂಧ ವಿಸ್ತರಿಸಿದ ರಬ್ಬರ್‌ನಂತಾಗಿದೆ. ರಬ್ಬರನ್ನು ಒಂದು ಬಾರಿ ವಿಸ್ತರಿಸಿದರೆ(ಹಿಡಿದು ಎಳೆದರೆ) ಮತ್ತೆ ಅದನ್ನು ಪೂರ್ವದ ಸ್ಥಿತಿಗೆ ಮರಳಿಸಲು ಸಾಧ್ಯವಾಗದು. ಆರ್‌ಬಿಐಯ ಸ್ವಾಯತ್ತತೆ ಮೇಲೆ ನಡೆಸಿರುವ ಈ ಮಾರಕ ಹೊಡೆತದ ನೆನಪು ಸುದೀರ್ಘಾವಧಿಯವರೆಗೆ ಉಳಿಯಲಿದೆ ಎಂದು ಆರ್‌ಬಿಐಯ ಮಾಜಿ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಬಾರಿಯ ಸಭೆಗೂ ಮುನ್ನ, ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳು ಆರ್‌ಬಿಐ ಕಾರ್ಯನೀತಿ ವಿಷಯ(ಪಾಲಿಸಿ ಮ್ಯಾಟರ್ಸ್)ಗಳ ಬಗ್ಗೆ ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ ಒತ್ತಡ ಹೇರುತ್ತಾ ಬಂದಿದ್ದರು. ಇದರಿಂದ ಆರ್‌ಬಿಐ ತನ್ನ ಸ್ವಾಯತ್ತತೆ ಕಳೆದುಕೊಳ್ಳುವ ಅಪಾಯದಲ್ಲಿದೆ ಎಂದು ಬ್ಯಾಂಕ್‌ನ ಕೆಲವು ಮಾಜಿ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು. ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಇರುವಂತೆಯೇ, ಕೃಷಿ ಆದಾಯ ಹಾಗೂ ಸಾಕಷ್ಟು ಉದ್ಯೋಗ ಸೃಷ್ಟಿಯಾಗದಿರುವ ಬಗ್ಗೆ ಮತದಾರರಲ್ಲಿ ಇರುವ ಆತಂಕವನ್ನು ಗಮನಿಸಿರುವ ಪ್ರಧಾನಿ ಮೋದಿ, ಆರ್ಥಿಕತೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆರ್‌ಬಿಐ ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆಗೊಳಿಸಬೇಕೆಂದು ಬಯಸುತ್ತಿದ್ದಾರೆ.

ಕೇಂದ್ರ ಸರಕಾರ ಹಾಗೂ ಆರ್‌ಬಿಐ ನಡುವಿನ ಸಂಬಂಧ ಹದಗೆಡುತ್ತಿರುವುದನ್ನು ಈ ತಿಂಗಳ ಆರಂಭದಲ್ಲಿ ಉಲ್ಲೇಖಿಸಿರುವ ರಾಷ್ಟ್ರೀಯ ಮಾಧ್ಯಮಗಳು, ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ರಾಜೀನಾಮೆ ನೀಡಲು ಯೋಚಿಸುತ್ತಿದ್ದಾರೆ ಎಂದು ತಿಳಿಸಿತ್ತು. ಈ ಹಿಂದೆ ಆರ್‌ಬಿಐ ಆಡಳಿತ ಮಂಡಳಿಯ ಕಾರ್ಯ ಸಲಹಾ ಮಂಡಳಿಯಂತಿತ್ತು. ಆದರೆ 1934ರ ಕಾನೂನು ಆರ್‌ಬಿಐಗೆ ಹೆಚ್ಚಿನ ಅಧಿಕಾರ ನೀಡಿದೆ. ಆರ್‌ಬಿಐಯ ಈ ಮಾರ್ಪಾಡಿಗೆ ಪೂರಕವಾಗಿ ಕೇಂದ್ರ ಸರಕಾರ ಲೆಕ್ಕಪತ್ರ, ತಂತ್ರಜ್ಞಾನ ಮತ್ತು ಅರ್ಥಶಾಸ್ತ್ರಜ್ಞರನ್ನು ಆರ್‌ಬಿಐ ಆಡಳಿತ ಮಂಡಳಿಗೆ ನೇಮಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News