ಕಟ್ಟಡಕ್ಕೆ ಢಿಕ್ಕಿ ಹೊಡೆದ ಏರ್‌ಇಂಡಿಯಾ ವಿಮಾನ

Update: 2018-11-29 04:05 GMT

ಸ್ಟಾಕ್‌ಹೋಂ, ನ. 29: 179 ಮಂದಿ ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಇಲ್ಲಿನ ಅರ್ಲಾಂಡಾ ವಿಮಾನ ನಿಲ್ದಾಣ ಬಳಿ ಕಟ್ಟಡಕ್ಕೆ ಢಿಕ್ಕಿ ಹೊಡೆದಿದ್ದು, ವಿಮಾನದಲ್ಲಿದ್ದ ಎಲ್ಲರೂ ಪವಾಡಸದೃಶವಾಗಿ ಪಾರಾಗಿದ್ದಾರೆ.

ವಿಮಾನದ ರೆಕ್ಕೆಯ ತುದಿ, ಗೇಟಿನ ಬಳಿ ತೆರೆದುಕೊಳ್ಳುವ ವೇಳೆ ಈ ಘಟನೆ ಸಂಭವಿಸಿದ್ದು, ಯಾರಿಗೂ ಗಾಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಬಳಿಕ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ವಿಮಾನದಿಂದ  ಇಳಿಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.

ಈ ಆಕಸ್ಮಿಕಕ್ಕೆ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ. ಈ ಘಟನೆ ಬುಧವಾರ ಸಂಜೆ 5.45ರ ವೇಳೆಗೆ ಸಂಭವಿಸಿದ್ದು, ಪ್ರಮುಖ ಅಂತರರಾಷ್ಟ್ರೀಯ ವಿಮಾನಗಳು ಇಳಿಯುವ ಟರ್ಮಿನಲ್ 5ಕ್ಕಿಂತ 50 ಮೀಟರ್ ದೂರದಲ್ಲಿ ನಡೆದಿದೆ.

ಬೋಯಿಂಗ್ ವಿಮಾನವನ್ನು ರನ್‌ವೇಯಲ್ಲಿ ನಿಲ್ಲಿಸುತ್ತಿದ್ದ ವೇಳೆ, ಎಡರೆಕ್ಕೆಯ ತುದಿ ಪಕ್ಕದ ಕಟ್ಟಡಕ್ಕೆ ತಗುಲಿರುವುದು ಚಿತ್ರದಲ್ಲಿ ಕಂಡುಬರುತ್ತಿದೆ. ವಿಮಾನದ ಪಕ್ಕದಲ್ಲಿ ಹಲವು ಪೊಲೀಸ್ ವಾಹನಗಳು ಹಾಗೂ ಅಗ್ನಿಶಾಮಕ ವಾಹನಗಳು ನಿಂತಿವೆ. ಅಪಘಾತಕ್ಕೀಡಾದ ವಿಮಾನ ಹೊಸದಿಲ್ಲಿಯಿಂದ ಹೊರಟಿತ್ತು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News