ವಿಗ್ರಹ ಕಳವು ಪ್ರಕರಣ: ಟಿವಿಎಸ್ ಸಮೂಹದ ಅಧ್ಯಕ್ಷರಿಗೆ ನಿರೀಕ್ಷಣಾ ಜಾಮೀನು ಮಂಜೂರು

Update: 2018-11-29 17:23 GMT

ಚೆನ್ನೈ, ನ.29: ವಿಗ್ರಹ ಕಳವು ಪ್ರಕರಣವೊಂದರಲ್ಲಿ ಶಂಕಿತ ಆರೋಪಿಯಾಗಿರುವ ಟಿವಿಎಸ್ ಮೋಟರ್ಸ್‌ನ ಅಧ್ಯಕ್ಷ ವೇಣು ಶ್ರೀನಿವಾಸನ್ ಅವರಿಗೆ ಮದ್ರಾಸ್ ಉಚ್ಚ ನ್ಯಾಯಾಲಯವು ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ತಮಿಳುನಾಡಿನ ಮುಖ್ಯ ಶಿಲ್ಪಿ ಎಂ.ಮುತ್ತಯ್ಯ ಹಾಗೂ ಹಿಂದು ಧಾರ್ಮಿಕ ಮತ್ತು ದತ್ತಿಗಳ ಇಲಾಖೆಯ ಮಾಜಿ ಆಯಕ್ತ ಪಿ.ಧನಪಾಲ ಅವರಿಗೂ ನ್ಯಾಯಮೂರ್ತಿ ಗಳಾದ ಆರ್.ಮಹಾದೇವನ್ ಮತ್ತು ಪಿ.ಡಿ.ಆದಿಕೇಶವಲು ಅವರ ವಿಶೇಷ ವಿಭಾಗೀಯ ಪೀಠವು ನಿರೀಕ್ಷಣಾ ಜಾಮೀನುಗಳನ್ನು ಮಂಜೂರು ಮಾಡಿತು. ಆದರೆ ಇಲಾಖೆಯ ಹೆಚ್ಚುವರಿ ಆಯುಕ್ತ ಎನ್.ತಿರುಮಗಳ್ ಅವರು ಪ್ರಕರಣದೊಂದಿಗೆ ನೇರ ಸಂಬಂಧ ಹೊಂದಿದ್ದಾರೆಂದು ಇಲಾಖೆಯ ಮೂವರು ಜಂಟಿ ಆಯುಕ್ತರು ಹೇಳಿಕೆಗಳಲ್ಲಿ ದೃಢೀಕರಿಸಿರುವ ಹಿನ್ನೆಲೆಯಲ್ಲಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯವು ನಿರಾಕರಿಸಿತು.

ಪ್ರಕರಣವು ಮೈಲಾಪುರದ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದಿಂದ ಕಾಣೆಯಾಗಿರುವ ಮೂರು ಪ್ರಾಚೀನ ವಿಗ್ರಹಗಳಿಗೆ ಸಂಬಂಧಿಸಿದೆ.

ರಾಹು,ಕೇತು ಮತ್ತು ನವಿಲು ಅಮ್ಮನ್ ವಿಗ್ರಹಗಳು ದೇವಸ್ಥಾನದಿಂದ ಕಾಣೆಯಾಗಿವೆ ಎಂದು ಆರೋಪಿಸಿ ಭಕ್ತರೋರ್ವರು ಸಲ್ಲಿಸಿದ್ದ ದೂರಿನ ಮೇರೆಗೆ ಸಿಐಡಿಯ ವಿಗ್ರಹ ಘಟಕವು ಶ್ರೀನಿವಾಸನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿತ್ತು. ಆರೋಪಿಗಳು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿಗಳನ್ನು ಸಲ್ಲಿಸಿದ್ದರು.2004ರಲ್ಲಿ ದೇವಸ್ಥಾನದಲ್ಲಿ ಕುಂಭಾಭಿಷೇಕ ನಡೆದ ಸಂದರ್ಭದಲ್ಲಿ ಈ ವಿಗ್ರಹಗಳು ಕಾಣೆಯಾಗಿದ್ದವು.

ತಿರುಮಗಳ್ ಅವರು ಪ್ರಾಚೀನ ವಿಗ್ರಹಗಳಿದ್ದ ಜಾಗದಲ್ಲಿ ಹೊಸ ವಿಗ್ರಹಗಳನ್ನಿರಿಸುತ್ತಿದ್ದನ್ನು ಅರ್ಚಕರು ನೋಡಿದ್ದರು ಮತ್ತು ಅವುಗಳಿಗೆ ಪೂಜೆ ಮಾಡಲು ನಿರಾಕರಿಸಿದ್ದರು ಎಂದೂ ನ್ಯಾಯಾಲಯವು ಅವರ ಅರ್ಜಿಯ ನಿರಾಕರಣೆ ವೇಳೆ ತಿಳಿಸಿತು.

ಇತರ ಮೂವರಿಗೆ ಜಾಮೀನು ನೀಡಿಕೆಯನ್ನು ವಿರೋಧಿಸಿದ ಪೊಲೀಸರು, ವಿಚಾರಣೆ ವೇಳೆ ಈ ಮೂವರು ವಿಗ್ರಹಗಳ ನಾಪತ್ತೆಯಲ್ಲಿ ಭಾಗಿಯಾಗಿರುವುದಕ್ಕೆ ತಿರುಮಗಳ್ ಸಾಕ್ಷಗಳನ್ನು ಒದಗಿಸಿದರೆ ಇವರನ್ನು ಬಂಧಿಸುವುದು ಕಷ್ಟವಾಗಲಿದೆ ಎಂದು ಹೇಳಿದಾಗ ನ್ಯಾಯಾಲಯವು,ಅಂತಹ ಸ್ಥಿತಿಯಲ್ಲಿ ಜಾಮೀನು ರದ್ದುಗೊಳಿಸುವಂತೆ ಕೋರಲು ಪೊಲೀಸರು ಸ್ವತಂತ್ರರಿದ್ದಾರೆ ಎಂದು ಭರವಸೆ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News