×
Ad

ಉಡುಪಿ ರಂಗಾಯಣಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ: ಸಚಿವೆ ಡಾ. ಜಯಮಾಲಾ

Update: 2018-11-30 17:52 IST

ಉಡುಪಿ, ನ.30: ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿ ರುವ ಉಡುಪಿ ರಂಗಾಯಣಕ್ಕೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ತಿಳಿಸಿದ್ದಾರೆ.

ಆದಿಉಡುಪಿ ಎಂಪಿಎಂಸಿ ಯಾರ್ಡ್ ಬಳಿಯ ಸುಮಾರು 1.37 ಎಕರೆ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಜಿಲ್ಲಾ ರಂಗ ಮಂದಿರ ಹಾಗೂ ರಂಗಾ ಯಣ ಕಟ್ಟಡಕ್ಕೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿ ದ್ದರು.

ರಂಗಾಯಣದಲ್ಲಿ ಪ್ರಯೋಗ ಸಭಾಂಗಣ, ಬೋಧನ ಕೊಠಡಿ, ತಾಲೀಮು ಕೊಠಡಿ, ವಿದ್ಯಾರ್ಥಿಗಳಿಗೆ ವಾಸದ ಕೊಠಡಿಗಳು, ಬಯಲು ರಂಗಸ್ಥಳ, ಕ್ಯಾಂಟೀನ್‌ಗಳನ್ನು ನಿರ್ಮಿಸಬೇಕಾಗಿದೆ. ಜಿಲ್ಲಾ ರಂಗ ಮಂದಿರ ನಿರ್ಮಾಣಕ್ಕೆ ಎರಡು ಕೋಟಿ ರೂ. ಮಂಜೂರು ಆಗಿದ್ದು, ಅದರಲ್ಲಿ 50ಲಕ್ಷ ರೂ.ವನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.

ಈ ರಂಗಾಯಣದಿಂದ ಕಲೆಯ ಹಲವು ಪ್ರಕಾರಗಳು ಇನ್ನಷ್ಟು ಬೆಳೆಯಲಿದೆ. ಕಲಾವಿದರಿಗೆ ತಮ್ಮಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಇದು ಸೂಕ್ತವಾದ ವೇದಿಕೆ ಆಗಲಿದೆ. ಆದಷ್ಟು ಬೇಗ ರಂಗ ಚಟುವಟಿಕೆಗಳು ಇಲ್ಲಿ ಆರಂಭ ಗೊಳ್ಳಲಿದೆ. ಈ ನಿಟ್ಟಿನಲ್ಲಿ ಇದರ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣ ಗೊಳಿಸಲಾಗುವುದು ಎಂದರು.

ರಂಗ ಸಮಾಜದ ಸದಸ್ಯ ಗೋಪಾಲಕೃಷ್ಣ ನಾಯರಿ ಮಾತನಾಡಿ, ರಂಗಾ ಯಣದಲ್ಲಿ ಪ್ರಧಾನ ಸಮಸ್ಯೆ ಜಾಗದ ಕೊರತೆ. ನಮ್ಮದು ಆವರಣಕ್ಕೆ ಸಂಬಂಧ ಪಟ್ಟ ಕಲೆಯಾಗಿರುವುದರಿಂದ ತಾಲೀಮು ಮಾಡಲು ಜಾಗ ಇರುವುದಿಲ್ಲ. ಆದುದರಿಂದ ರಂಗಮಂದಿರಕ್ಕಿಂತ ಮುಖ್ಯವಾಗಿ ತಾಲೀಮು ಕೊಠಡಿಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಕಲಬುರಗಿ ರಂಗಾಯಣ ನಿರ್ದೇಶಕ ಮಹೇಶ್ ಪಾಟೀಲ್, ಶಿವಮೊಗ್ಗ ರಂಗಾಯಣ ನಿರ್ದೇಶಕ ಎಂ. ಗಣೇಶ್, ರಂಗ ಸಮಾಜದ ಸದಸ್ಯರಾದ ಎಲ್.ಕೃಷ್ಣಪ್ಪ, ಮಲ್ಲಿಕಾರ್ಜುನ ಕಡ ಕೊಳ, ಉಮಾ ಬಾರಿಗಿಡದ, ಶ್ರೀಪಾದ ಭಟ್, ವಿಶ್ವೇಶ್ವರಿ ಹಿರೇಮಠ, ಎಂ. ಚಂದ್ರಕಾಂತ, ಸಹನಾ ಪಿಂಜಾರ್, ಇಡಗುಂಜಿ ಶ್ರೀಮಹಾಗಣಪತಿ ಯಕ್ಷಗಾನ ಮಂಡಳಿಯ ಮುಖ್ಯಸ್ಥ ಶಿವಾನಂದ ಹೆಗಡೆ ಉಪಸ್ಥಿತರಿದ್ದರು.

ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಆರ್. ಚಂದ್ರಶೇಖರ್ ಸ್ವಾಗತಿಸಿದರು. ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಮುಗಿಯುತ್ತಿದ್ದಂತೆಯೇ ರಂಗಭೂಮಿ ಕಲಾವಿದರು ಸಚಿವೆ ಜಯಮಾಲಾ ಅವರ ಬಳಿ ತೆರಳಿ ಸ್ಥಳಾವಕಾಶದ ಕೊರತೆಯಿಂದ ಜಿಲ್ಲಾ ರಂಗ ಮಂದಿರವನ್ನು ಮಾತ್ರ ಇಲ್ಲೇ ಉಳಿಸಿ, ರಂಗಾಯಣವನ್ನು ಅಲೆವೂರು ಗ್ರಾಮ ಪ್ರಗತಿನಗರಕ್ಕೆ ಸ್ಥಳಾಂತರಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಮುಂದೆ ಚರ್ಚೆ ಮಾಡುವ ಎಂದು ಸಚಿವರು ಭರವಸೆ ನೀಡಿದರು.

ಬಳಿಕ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಆದಿಉಡುಪಿ ಯಲ್ಲಿ ರಂಗಾಯಣ ನಿರ್ಮಿಸುವುದು ಖಚಿತ. ಇಲ್ಲಿ ರಂಗಾಯಣಕ್ಕೆ ಅಡಿಗಲ್ಲು ಹಾಕಿದ್ದೇವೆ. ಹಾಗಾಗಿ ರಂಗಾಯಣ ಇಲ್ಲೇ ಇರುತ್ತದೆ. ಆದರೆ ಇಲ್ಲೇ ಸಮೀಪ ದಲ್ಲಿರುವ ಜಾಗಕ್ಕೆ ಜಿಲ್ಲಾ ರಂಗಮಂದಿರವನ್ನು ಸ್ಥಳಾಂತರಿಸಲಾಗುವುದು. ಇಲ್ಲಿ ರಂಗಾಯಣ ಮಾತ್ರ ನಿರ್ಮಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News