ನೆರವಿಗೆ ಪ್ರತಿಯಾಗಿ ಭಾರತದ ಸೇನಾ ನೆಲೆ ಪ್ರಸ್ತಾಪವಿಲ್ಲ: ಮಾಲ್ದೀವ್ಸ್

Update: 2018-11-30 14:54 GMT

ಮಾಲೆ (ಮಾಲ್ದೀವ್ಸ್), ನ. 30: ಮಾಲ್ದೀವ್ಸ್‌ನಲ್ಲಿ ಭಾರತೀಯ ಸೈನಿಕರನ್ನು ನಿಯೋಜಿಸುವುದಕ್ಕೆ ಪ್ರತಿಯಾಗಿ ಆ ದೇಶಕ್ಕೆ ಒಂದು ಬಿಲಿಯ ಡಾಲರ್ (ಸುಮಾರು 7,000 ಕೋಟಿ ರೂಪಾಯಿ) ನೆರವು ನೀಡುವ ಕೊಡುಗೆಯನ್ನು ಭಾರತ ನೀಡಿದೆ ಎಂಬ ಮಾಧ್ಯಮ ವರದಿಗಳನ್ನು ಮಾಲ್ದೀವ್ಸ್ ಸರಕಾರ ಬಲವಾಗಿ ನಿರಾಕರಿಸಿದೆ.

ಮಾಲ್ದೀವ್ಸ್ ಭೂಭಾಗವನ್ನು ನೆಲೆಯನ್ನಾಗಿ ಬಳಸಲು ಯಾವುದೇ ವಿದೇಶಿ ಸೇನೆಗಳಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಮಾಲ್ದೀವ್ಸ್ ವಿದೇಶ ವ್ಯವಹಾರಗಳ ಸಚಿವ ಅಬ್ದುಲ್ಲಾ ಶಾಹಿದ್ ಹೇಳಿದರು.

‘‘ಆರ್ಥಿಕ ನೆರವು ಅಥವಾ ಇತರ ಲಾಭಗಳಿಗೆ ಪ್ರತಿಯಾಗಿ ಮಾಲ್ದೀವ್ಸ್‌ನಲ್ಲಿ ಭಾರತದ ಸೇನಾ ನೆಲೆಯೊಂದನ್ನು ಸ್ಥಾಪಿಸಲು ಸರಕಾರ ಯೋಚಿಸುತ್ತಿದೆ ಎಂಬ ಮಾಧ್ಯಮ ವರದಿಗಳನ್ನು ಸ್ಪಷ್ಟವಾಗಿ ನಿರಾಕರಿಸುತ್ತೇನೆ. ಇದು ಆಧಾರರಹಿತ ಹಾಗೂ ತನ್ನ ನೆರೆ ದೇಶಗಳೊಂದಿಗೆ ಹಾಗೂ ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಉತ್ತಮ ಬಾಂಧವ್ಯವನ್ನು ಮರುಬೆಳೆಸಲು ಮುಂದಾಗಿರುವ ಸರಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಇದಾಗಿದೆ’’ ಎಂಬುದಾಗಿ ಸಚಿವರು ಟ್ವಿಟರ್‌ನಲ್ಲಿ ಹೇಳಿದ್ದಾರೆ.

‘‘ಸರಕಾರವು ಮಾಲ್ದೀವ್ಸ್‌ನ ರಾಷ್ಟ್ರೀಯ ಹಿತಾಸಕ್ತಿಗೆ ಪೂರಕವಾಗಿ ಯಾವತ್ತೂ ಕೆಲಸ ಮಾಡಲಿದೆ ಹಾಗೂ ದೇಶದ ಸಾರ್ವಭೌಮತ್ವ ಮತ್ತು ಸ್ವಾತಂತ್ರದೊಂದಿಗೆ ರಾಜಿಮಾಡಿಕೊಳ್ಳುವ ಯಾವುದೇ ಅಂತರ್‌ರಾಷ್ಟ್ರೀಯ ಬದ್ಧತೆಗೆ ಒಳಗಾಗುವುದಿಲ್ಲ’’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News