×
Ad

ಪ್ರವಾದಿ ಸಂದೇಶ ಸರ್ವ ಮಾನವರಿಗೆ ತಲುಪಲಿ: ಸುಂದರ್ ವಾಸ್ತರ್

Update: 2018-11-30 21:22 IST

ಉಡುಪಿ, ನ.30: ಪ್ರವಾದಿ ಮುಹಮ್ಮದ್(ಸ)ರ ಸಂದೇಶವು ಕೇವಲ ಮುಸ್ಲಿಮರಿಗೆ ಮಾತ್ರವಲ್ಲದೆ, ಸರ್ವ ಮಾನವರಿಗಾಗಿ ಬಂದಿರುವಂತಹದ್ದು. ಪ್ರವಾದಿ ಮುಹಮ್ಮದರ ಜೀವನ ಸಂದೇಶವು ಪ್ರತಿಯೊಬ್ಬರ ಮನೆ ಮನೆಗೆ ತಲುಪಿಸುವ ಕಾರ್ಯ ಆಗಬೇಕಾಗಿದೆ ಎಂದು ದಲಿತ ಮುಖಂಡ ಸುಂದರ್ ಮಾಸ್ತರ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಜಮಾಅತೆ ಇಸ್ಲಾಮಿ ಹಿಂದ್‌ನ ಮಾನವೀಯ ಮೌಲ್ಯಗಳು ಪ್ರವಾದಿ ಜೀವನದ ಬೆಳಕಿನಲ್ಲಿ ಎಂಬ ಸೀರತ್ ಅಭಿಯಾನದ ಅಂಗವಾಗಿ ಉಡುಪಿಯ ಜಾಮಿಯ ಮಸೀದಿಯಲ್ಲಿ ಶುಕ್ರವಾರ ಆಯೋಜಿಸಲಾದ ಪ್ರವಾದಿ ಮುಹಮ್ಮದ್(ಸ) ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ರಂಗಕರ್ಮಿ ನಾಗೇಶ್ ಉದ್ಯಾವರ್ ಮಾತನಾಡಿ, ಪ್ರವಾದಿಯ ಸಂದೇಶ ಸರ್ವಕಾಲಿಕವಾದುದು. ಎಲ್ಲರೂ ಸಹ ಪ್ರವಾದಿಯವರ ಜೀವನವನ್ನು ಅರಿಯ ಬೇಕು ಮುಸ್ಲೀಮೇತರಿಗೂ ಸಹ ಅದನ್ನು ತಲುಪಿಸುವ ಕಾರ್ಯ ಆಗಬೇಕು ಎಂದು ಅಭಿಪ್ರಾಯ ಪಟ್ಟರು.

ಜಮಾಅತೆ ಇಸ್ಲಾಮಿ ಹಿಂದ್ ವಲಯ ಸಂಚಾಲಕ ಅಬ್ದುಸ್ಸಲಾಂ ಯು. ದಿಕ್ಸೂಚಿ ಮಾತನಾಡಿದರು. ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಮೌಲಾನ ಮಹಮ್ಮದ್ ಇಕ್ಬಾಲ್ ಮುಲ್ಲಾ, ರಾಜ್ಯಾಧ್ಯಕ್ಷ ಅಥಾರುಲ್ಲಾ ಶರೀಫ್, ಸದ್ಭಾವನ ವೇದಿಕೆಯ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ, ಉಡುಪಿ ಜಾಮಿಯ ಮಸೀದಿ ಅಧ್ಯಕ್ಷ ಯಾಸೀನ್, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಉಪಾಧ್ಯಕ್ಷ ಅಬ್ದುಲ್ ಹಾಜಿ ಪರ್ಕಳ, ಸಾಲಿಹಾತ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಇಸ್ಲಾಯಿಲ್ ಉಪಸ್ಥಿತರಿದ್ದರು.

ಅಭಿಯಾನದ ಸಹ ಸಂಚಾಲಕ ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳಿಕ ಪ್ರಚಾರ ವಾಹನದ ಜೊತೆಯಲ್ಲಿ ಜಿಲ್ಲಾ ಎಸ್‌ಐಒ ಕಾರ್ಯಕರ್ತರಿಂದ ಬೀದಿ ನಾಟಕವು ನಗರದ ವಿವಿಧ ಕಡೆಗಳಲ್ಲಿ ಪ್ರದರ್ಶನಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News